ಜಿಲ್ಲೆ

ಬೈಕ್​ಗೆ ಹಗ್ಗ ಕಟ್ಟಿ ಎಳೆದು ಆಕ್ರೋಶ

ಹುಬ್ಬಳ್ಳಿ: ಪೆಟ್ರೋಲ್ ದರ ಶತಕದ ಗಡಿ ದಾಟಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಗರದ ವಿವಿಧೆಡೆ ಶುಕ್ರವಾರ ಎತ್ತಿನ ಬಂಡಿ, ಸೈಕಲ್ ಸವಾರಿ ಮಾಡಿ, ಬೈಕ್​ಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.

ಚನ್ನಮ್ಮ ವೃತ್ತ ಹಾಗೂ ಬಂಕಾಪುರ ಚೌಕದಲ್ಲಿ ಪೆಟ್ರೋಲ್ ಬಂಕ್ ಎದುರು ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಬುಲೆಟ್ ಬೈಕ್​ಗೆ ಹಗ್ಗ ಕಟ್ಟಿ ಎಳೆದರು. ಸೈಕಲ್, ಎತ್ತಿನ ಬಂಡಿಯಲ್ಲಿ ಸಂಚರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. 100 ನಾಟ್​ಔಟ್ ಎಂಬ ಫಲಕ ಹಿಡಿದು ಪ್ರತಿಭಟಿಸಿದರು.

ಕಳೆದ 12 ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 30 ರೂ. ಹೆಚ್ಚಳವಾಗಿದೆ. ಇದು ಅಂತಾರಾಷ್ಟ್ರೀಯ ತೈಲ ಕಂಪನಿಗಳು ಏರಿಕೆ ಮಾಡಿದ್ದರಿಂದಾಗಿಲ್ಲ. ಬದಲಾಗಿ ಮೋದಿ ಸರ್ಕಾರ ಇಂಧನದ ಮೇಲೆ ಕಠಿಣ ತೆರಿಗೆ ವಿಧಿಸಿದ್ದರಿಂದ ಹೆಚ್ಚಳವಾಗಿದೆ. ಕರೊನಾ ಲಾಕ್​ಡೌನ್​ನಿಂದಾಗಿ ಈಗಾಗಲೇ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಕೂಡಲೇ ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹು-ಧಾ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ರಾಜಶೇಖರ ಮೆಣಸಿನಕಾಯಿ, ಅನ್ವರ ಮುಧೋಳ, ಸದಾನಂದ ಡಂಗನವರ, ಮಹೇಂದ್ರ ಸಿಂಘಿ, ರಜತ ಉಳ್ಳಾಗಡ್ಡಿ ಮಠ, ಬಂಗಾರೇಶ ಹಿರೇಮಠ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

35 ರೂ. ಪೆಟ್ರೋಲ್ 100 ರೂ.ಗೆ ಮಾರಾಟ ?

ಕೇಂದ್ರ ಸರ್ಕಾರ ಡೀಸೆಲ್ ಮೇಲೆ 31.84 ರೂ., ಪೆಟ್ರೋಲ್ ಮೇಲೆ 31.98 ರೂ. ತೆರಿಗೆ ವಸೂಲಿ ಮಾಡುತ್ತಿದೆ. ರಾಜ್ಯ ಸರ್ಕಾರ ಶೇ.24 ಮತ್ತು 35ರಷ್ಟು ಮಾರಾಟ ತೆರಿಗೆ ವಿಧಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಧಿಸುತ್ತಿರುವ ತೆರಿಗೆ ಮತ್ತು ಏಜೆಂಟ್ ಕಮಿಷನ್ ಸೇರಿ 60-65 ರೂ. ಹಣ ಹರಿದು ಹೋಗುತ್ತಿದೆ. ಇಂಧನದ ಮೂಲ ಬೆಲೆ 35 ರೂ. ಇದ್ದರೆ ತೆರಿಗೆ 65 ಸೇರಿ ಒಟ್ಟು 100 ರೂ. ಲೀಟರ್​ನಂತೆ ಗ್ರಾಹಕರಿಗೆ ಪೆಟ್ರೋಲ್ ಸಿಗುತ್ತಿದೆ. ಇಂಧನಗಳ ಮೇಲೆ ಸರ್ಕಾರ ವಿಧಿಸುತ್ತಿರುವ ಅವೈಜ್ಞಾನಿಕ ಮಾರಾಟ ಹಾಗೂ ಅಬಕಾರಿ ತೆರಿಗೆಗಳನ್ನು ಕಡಿಮೆ ಮಾಡಬೇಕು. ಇಂಧನವನ್ನೂ ಜಿಎಸ್​ಟಿ ವ್ಯಾಪ್ತಿಗೆ ಸೇರಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಒತ್ತಾಯಿಸಿದರು.

ಧಾರವಾಡ ವರದಿ

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ‘100- ನಾಟ್ ಔಟ್’ ಘೋಷಣೆಯೊಂದಿಗೆ ಕಾಂಗ್ರೆಸ್ ಮುಖಂಡರು ನಗರದ ವಿವಿಧ ಪೆಟ್ರೋಲ್ ಬಂಕ್​ಗಳ ಎದುರು ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಉಳವಯ್ಯ ಚಿಕ್ಕೊಪ್ಪ ನೇತೃತ್ವದಲ್ಲಿ ಧಾರವಾಡದ ಕೆ.ಸಿ. ಪಾರ್ಕ್ ಎದುರಿನ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಪ್ರಶಾಂತ ಕೇಕರೆ, ಆನಂದ ಸಿಂಗನಾಥ, ಸರೋಜಾ ಪಾಟೀಲ, ಸುರೇಖಾ ಪೂಜಾರ, ಬಾಬಾಜಾನ ದರುರ, ಬಸವರಾಜ ಜಾಧವ, ಮಂಜುನಾಥ ಕಾಮಕರ, ಇತರರಿದ್ದರು.

ಮತ್ತೊಂದೆಡೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ನೇತೃತ್ವದಲ್ಲಿ ನಗರದ ಎಲ್​ಇಎ ಕ್ಯಾಂಟೀನ್ ಬಳಿಯ ನರೇಗಲ್ಲ ಪೆಟ್ರೋಲ್ ಬಂಕ್ ಮುಂದೆ ಮೌನ ಪ್ರತಿಭಟನೆ ನಡೆಸಲಾಯಿತು. ಇಮ್ರಾನ ಕಳ್ಳಿಮನಿ, ರಾಜು ವಾರಂಗ, ಲೋಕೇಶ ಮ್ಯಾಗೇರಿ, ರವಿ ಗೌಳೆ, ಇತರರಿದ್ದರು.

ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ನೇತೃತ್ವದಲ್ಲಿ ಜಬ್ಬಾರ್ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಲಾಯಿತು. ಆನಂದ ಜಾಧವ, ಪ್ರಕಾಶ ಘಾಟಗೆ, ಆನಂದ ಮುಶಣ್ಣವರ, ಜೇಮ್್ಸ ಯಮಹಾ, ಇತರರಿದ್ದರು.