ಹನೂರು ಪಟ್ಟಣದ ಆರ್‌ಎಂಸಿ ಮುಂಭಾಗದ ರಸ್ತೆಯಲ್ಲಿ ಬುಧವಾರ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್‌ಗೆ ತಾಗಿದ್ದರಿಂದ ಸವಾರ ಗಾಯಗೊಂಡಿದ್ದಾರೆ.
ಹನೂರಿನ ಸಿದ್ದರಾಜು (50) ಗಾಯಗೊಂಡವರು. ಇವರು ಆರ್‌ಎಂಸಿಯಿಂದ ಪಟ್ಟಣದತ್ತ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮದ್ದೂರಿನಿಂದ ಮ.ಬೆಟ್ಟಕ್ಕೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು, ಬೈಕ್‌ಗೆ ತಾಗಿದೆ. ಪರಿಣಾಮ ಸಿದ್ದರಾಜು ಗಾಯಗೊಂಡರು. ಕೂಡಲೇ ಸ್ಥಳೀಯರು ಗಾಯಾಳುವನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹನೂರು ಪೊಲೀಸರು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಗುಚಿದ ಲಾರಿ: ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ರಾಮಾಪುರ-ನಾಲ್‌ರೋಡ್ ಮಾರ್ಗದ ತಿರುವಿನಲ್ಲಿ ಬುಧವಾರ ಕರಿಕಲ್ಲು ತುಂಬಿದ ಲಾರಿಯೊಂದು ಮಗುಚಿದೆ. ಬೆಳಗ್ಗೆ 6ರ ಸುಮಾರಿನಲ್ಲಿ ರಾಮಾಪುರದಿಂದ ತಮಿಳುನಾಡು ಕಡೆಗೆ ಕರಿಕಲ್ಲು ತುಂಬಿದ ಲಾರಿಯು ತೆರಳುತ್ತಿದ್ದಾಗ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಮಗುಚಿದ್ದು, ಕರಿಕಲ್ಲುಗಳು ನೆಲಕ್ಕುರುಳಿವೆ. ಸದ್ಯ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.