ಕೊಳ್ಳೇಗಾಲ: ತಾಲೂಕಿನ ಟಗರಪುರ ಬಳಿ ಬೈಕ್ ಹಾಗೂ ಆಂಬುಲೆನ್ಸ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮಲ್ಲಹಳ್ಳಿ ಗ್ರಾಮದ ಕುಮಾರ್ ಮತ್ತು ಮಹೇಶ್ ಗಾಯಗೊಂಡವರು. ಸೋಮವಾರ ಬೈಕ್‌ನಲ್ಲಿ ಟಗರಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಕೊಳ್ಳೇಗಾಲದಿಂದ ಮೈಸೂರು ಕಡೆಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ಚಾಲಕ ಮಹೇಶ್ ತಲೆ, ಮುಖಕ್ಕೆ ಗಭೀರ ಗಾಯವಾಗಿದೆ. ಹಿಂಬದಿ ಸವಾರ ಕುಮಾರ್ ಕಾಲು ಮುರಿತಕ್ಕೊಳಗಾಗಿದೆ. ಸ್ಥಳೀಯರು ತಕ್ಷಣ ಆಂಬುಲೆನ್ಸ್‌ನಲ್ಲಿ ಮೈಸೂರಿನ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಿದರು. ಡಿವೈಎಸ್ಪಿ ಎಂ.ಧರ್ಮೇಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ: ಅಪಘಾತ ತಡೆಗೆ ತಾಲೂಕಿನ ಟಗರಪುರ ಗ್ರಾಮದ ಹೆದ್ದಾರಿಯಲ್ಲಿ ಹಂಪ್ ನಿರ್ಮಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ವಾಹನ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.
ಟಗರಪುರ ಗ್ರಾಮದ ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಮೈಸೂರು-ಕೊಳ್ಳೇಗಾಲ ಮುಖ್ಯ ರಸ್ತೆ ಆಗಿರುವ ಹಿನ್ನೆಲೆ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಗ್ರಾಮದೊಳಗೆ ರಸ್ತೆ ಹಾದು ಹೋಗಿದ್ದು ರಸ್ತೆ ಬದಿಯಲ್ಲಿ ಬ್ಯಾಂಕ್, ಶಾಲೆ ಹಾಗೂ ಅಂಗಡಿ-ಮುಂಗಟ್ಟುಗಳಿವೆ. ಮುಖ್ಯವಾಗಿ ಟಗರಪುರ ವೃತ್ತದಲ್ಲಿ ನಾಲ್ಕು ರಸ್ತೆಗಳು ಕೂಡುವುದರಿಂದ ಜನರು, ವಾಹನ ಸವಾರರು ರಸ್ತೆ ದಾಟಲು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಚಾಲಕರು ಮನಬಂದತೆ ವಾಹನಗಳನ್ನು ಚಾಲನೆ ಮಾಡುತ್ತಾರೆ. ಸಂಬಂಧಪಟ್ಟವರು ರಸ್ತೆಗೆ ಹಂಪ್ ನಿರ್ಮಿಸಬೇಕು. ಹೆಚ್ಚುತ್ತಿರುವ ಅಪಘಾತ ತಡಗಟ್ಟಬೇಕು ಎಂದು ಆಗ್ರಹಿಸಿದರು.