ಜಿಲ್ಲೆ

ಬೈಕ್ ಸಂಚಾರಿ ಆರೋಗ್ಯ ಘಟಕ

ಸುಭಾಸ ಹೆಗಡೆ ಧೂಪದಹೊಂಡ

ಶಿರಸಿ: ಹಲವಾರು ವರ್ಷಗಳಿಂದ ಗ್ರಾಮೀಣ ಆರೋಗ್ಯ ಸೇವೆಯಲ್ಲಿ ತೊಡಗಿರುವ ಇಲ್ಲಿಯ ಸ್ಕೊಡ್​ವೆಸ್ ಸಂಸ್ಥೆ ಕೋವಿಡ್-19 ನಿಮೂಲನೆ ನಿಷೇಧಾಜ್ಞೆ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗೆ ಒಳಗಾದ ವ್ಯಕ್ತಿಗಳಿಗೆ ಸೇವೆ ನೀಡಲು ಟೀಮ್ ಸಂಜೀವಿನಿ ಹೆಸರಿನಲ್ಲಿ ಬೈಕ್ ಸಂಚಾರಿ ಆರೋಗ್ಯ ಘಟಕಗಳನ್ನು ಗುರುವಾರ ಆರಂಭಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಯೋಜನೆಯಡಿ ಸಂಚಾರಿ ಆರೋಗ್ಯ ಘಟಕಗಳನ್ನು ರೂಪಿಸಿ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಸ್ಕೊಡ್​ವೆಸ್ ಸಂಸ್ಥೆಯು ಕೋವಿಡ್-19 ನಿಯಂತ್ರಣದ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದ, ಮನೆಯಲ್ಲಿ ಆರೈಕೆ ವ್ಯವಸ್ಥೆ ಇಲ್ಲದ ಕೂಲಿ ಕಾರ್ವಿುಕರು, ಬಡ ಕುಟುಂಬದ ವೃದ್ಧರು, ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಅಂಗವಿಕಲರ ನೆರವಿಗೆ ಮುಂದಾಗಿದೆ. ಆರೋಗ್ಯ ಇಲಾಖೆಯ ಸಂಚಾರಿ ಆರೋಗ್ಯ ಘಟಕ ಪರಿಕಲ್ಪನೆ ಹಾಗೂ ಅನುಭವದಿಂದ ರೂಪಿತವಾದ ಈ ಬೈಕ್ ಸಂಚಾರಿ ಆರೋಗ್ಯ ಘಟಕಗಳನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಸ್ಕೊಡ್​ವೆಸ್ ಸಂಸ್ಥೆ ಆರಂಭಿಸಿದೆ.

ಲಭ್ಯವಾಗುವ ಸೇವೆಗಳು:

ಘಟಕಗಳು ಮನೆ ಭೇಟಿ ಸಂದರ್ಭದಲ್ಲಿ ಮಧುಮೇಹ (ಸಕ್ಕರೆ ಕಾಯಿಲೆ), ರಕ್ತದೊತ್ತಡ (ಬಿ.ಪಿ) ಪರೀಕ್ಷೆ ನಡೆಸಲಿವೆ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರ ಅನುಪಾಲನ ಸೇವೆ, ಆರೋಗ್ಯ ಸಲಹೆ, ಕೋವಿಡ್-19 ನಿಯಂತ್ರಣದ ಕುರಿತು ಜಾಗೃತಿ ನೀಡಲಿವೆ. ಔಷಧಗಳು, ಮಾತ್ರೆಗಳು ಖಾಲಿಯಾದಲ್ಲಿ ಅಂತಹ ಔಷಧ ಮಾತ್ರೆಗಳನ್ನು ವಿತರಿಸಲಿವೆ. ತೀವ್ರ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಆಸ್ಪತ್ರೆಗಳಿಗೆ ಸಾಗಿಸಲು ಸಹಾಯ ಮಾಡಲಿವೆ. ಅಲ್ಲದೆ, ದೂರವಾಣಿ ಮೂಲಕ ತಜ್ಞ ವೈದ್ಯರ ಆರೋಗ್ಯ ಸಲಹೆ ನೀಡಲಾಗುತ್ತದೆ. ಈ ಎಲ್ಲಾ ಸೇವೆಗಳು ಸಂಪೂರ್ಣ ಉಚಿತವಾಗಿರುತ್ತವೆ.

ನೆರವಿಗಾಗಿ ಸಹಾಯವಾಣಿ ಹೆಲ್ಪ್ ಡೆಸ್ಕ್:

ಸೇವೆಯ ಅವಶ್ಯಕತೆ ಇರುವವರು ಸಹಾಯವಾಣಿ ಸಂಖ್ಯೆ (08384-236398/238398/99001 95285) ಬೆಳಗ್ಗೆ 8ರಿಂದ ಸಂಜೆ 5 ಗಂಟೆಯ ವರೆಗೆ ಕರೆ ಮಾಡಿ ಹೆಸರು ನೋಂದಾಯಿಸಿದಲ್ಲಿ ಟೀಮ್ ಸಂಜೀವಿನಿ ಸದಸ್ಯರು ಮನೆ ಭೇಟಿ ಮಾಡಿ ಸೇವೆ ಒದಗಿಸುತ್ತಾರೆ. ಸಾಧ್ಯ ಇರುವವರು ಗೂಗಲ್ ಮ್ಯಾಪ್ ಮೂಲಕ ಲೋಕೇಶನ್ ಶೇರ್ ಮಾಡಿದರೆ ಸುಲಭವಾಗಿ ವಿಳಾಸಕ್ಕೆ ತಲುಪಲು ಸಾಧ್ಯವಾಗುತ್ತದೆ.

ತಂಡದಲ್ಲಿ ಏನೇನು?

ಟೀಮ್ ಸಂಜೀವಿನಿ ಸ್ಕೊಡ್​ವೇಸ್ ಸಂಸ್ಥೆಯ ವೈದ್ಯಕೀಯ ಸೇವಾ ವಿಭಾಗದ ತಂಡವಾಗಿದ್ದು, ವೈದ್ಯರು, ನರ್ಸ್​ಗಳು, ಫಾರ್ಮಸಿಸ್ಟ್​ಗಳು, ಲ್ಯಾಬ್ ಟೆಕ್ನಿಶಿಯನ್​ಗಳು, ಆರೋಗ್ಯ ಸಹಾಯಕರು ಹಾಗೂ ಸ್ವಯಂಸೇವಕರು ಸೇವೆ ಸಲ್ಲಿಸುತ್ತಿದ್ದಾರೆ. ಎರಡು ಆಂಬುಲೆನ್ಸ್​ಗಳು, 5 ಬೈಕ್​ಗಳು ಹಾಗೂ 1 ಬೊಲೆರೊವನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದ್ದು, ಚಿಕಿತ್ಸೆಯ ಅವಶ್ಯಕತೆ ಆಧರಿಸಿ ಸೇವೆ ನೀಡಲಾಗುವುದು.

ಶಿರಸಿ ನಗರ ಪ್ರದೇಶ ವ್ಯಾಪ್ತಿಗೆಂದು ಈ ಸೇವೆ ಆರಂಭಿಸಿದ್ದು, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಇತರೆ ತಾಲೂಕುಗಳಿಗೂ ಸೇವೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಘಟಕಗಳ ಸೇವೆ ವಿಸ್ತರಿಸುವ ಹಾಗೂ ನಿಷೇಧಾಜ್ಞೆ ಕೊನೆಗೊಳ್ಳುವವರೆಗೆ ನಿರಂತರವಾಗಿ ಬಡ ಜನರಿಗೆ ಸೇವೆ ನೀಡಬೇಕಿರುವುದರಿಂದ ಆರೋಗ್ಯ ಸೇವೆ ನೀಡಲು ಆಸಕ್ತಿ ಇರುವ ವೈದ್ಯರು, ನರ್ಸ್​ಗಳು, ಲ್ಯಾಬ್ ಟೆಕ್ನಿಶಿಯನ್ಸ್ ಹಾಗೂ ಆರೋಗ್ಯ ಕಾರ್ಯಕರ್ತರು ನಮ್ಮೊಂದಿಗೆ ಕೈಜೋಡಿಸಬೇಕು. | ಡಾ. ವೆಂಕಟೇಶ ನಾಯ್ಕ, ಕಾರ್ಯನಿರ್ವಾಹಕ ನಿರ್ದೇಶಕ, ಸ್ಕೊಡ್​ವೆಸ್ ಸಂಸ್ಥೆ

EndFragment