ಜಿಲ್ಲೆ

ಬೈಕ್ ಚಾಲಕನಿಗೆ ಎರಡು ವರ್ಷ ಜೈಲು

ಕಲಬುರಗಿ: ಅಫಜಲಪುರದ ರಾಷ್ಟ್ರೀಯ ಹೆದ್ದಾರಿಯ ಹಡಗಿಲ್ ಹಾರುತಿ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಮೋಟಾರ್ ಸೈಕಲ್ ಡಿಕ್ಕಿ ಮಾಡಿ, ಪಾದಯಾತ್ರಿಯ ಸಾವಿಗೆ ಕಾರಣನಾದ ಬೈಕ್ ಚಾಲಕ ಉಮಾಪತಿಗೆ ಎರಡು ವರ್ಷ ಸಾದಾ ಜೈಲು, ೧೦ ಸಾವಿರ ರೂ. ದಂಡ ವಿಧಿಸಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಸುಶಾಂತ ಎಂ.ಚೌಗಲೆ ಆದೇಶಿಸಿದ್ದಾರೆ. ೨೦೨೧ರ ಮೇ ೫ರಂದು ಬೆಳಗ್ಗೆ ಹಡಗಿಲ್ ನಾಗೇಂದ್ರಪ್ಪ ಅವರು ನಡೆಯುತ್ತ ಹೊರಟಿದ್ದಾಗ ಬೈಕ್ ಚಾಲಕ ಉಮಾಪತಿ ಅತಿವೇಗ, ಅಲಕ್ಷದಿಂದ ಚಲಾಯಿಸಿಕೊಂಡು ಡಿಕ್ಕಿ ಮಾಡಿದ್ದರಿಂದ ನಾಗೇಂದ್ರಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣ ಕುರಿತು ಸಂಚಾರಿ ಪೊಲೀಸ್ ಠಾಣೆ-೧ರ ಪಿಎಸ್‌ಐ ಭಾರತಿಬಾಯಿ, ಬಿಪಿಪಿಐ ಶಾಂತಿನಾಥ ತನಿಖೆ ನಡೆಸಿ, ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಶಾಂತ ಚೌಗಲೆ ತೀರ್ಪು ನೀಡಿದ್ದಾರೆ. ಕಲಂ ೨೭೯ ಅಡಿ ಅಪರಾಧಕ್ಕೆ ಆರು ತಿಂಗಳು, ಸಾವಿರ ರೂ. ದಂಡ, ಕಲಂ ೩೦೪(ಎ) ಅಪರಾಧಕ್ಕೆ ೧೦ ಸಾವಿರ ದಂಡ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ವಿನಾಯಕ ಕೋಡ್ಲಾ ವಾದ ಮಂಡಿಸಿದ್ದರು.