ಹನೂರು: ರೈತರಿಗೆ ಸಮರ್ಪಕವಾಗಿ ನೀರೊದಗಿಸುವ ಉದ್ದೇಶದಿಂದ ಭಾನುವಾರ ಶಾಸಕ ಎಂ.ಆರ್. ಮಂಜುನಾಥ್ ಅವರು ಸುಮಾರು 2 ಗಂಟೆಗಳ ಕಾಲ ಬೈಕ್‌ನಲ್ಲಿ ತೆರಳಿ ಹುಬ್ಬೆಹುಣಸೆ ಡ್ಯಾಂ ಮೂಲಕ ಹಾದು ಹೋಗಿರುವ ನಾಲೆ ಹಾಗೂ ಅಚ್ಚುಕಟ್ಟು ಪ್ರದೇಶವನ್ನು ಪರಿಶೀಲಿಸಿದರು.
ಹುಬ್ಬೆಹುಣಸೆ ಡ್ಯಾಂ ಮೂಲಕ ಹಾದು ಹೋಗಿರುವ ನಾಲೆಯಲ್ಲಿ ನೀರೊದಗಿಸುತ್ತಿಲ್ಲ. ಹಾಗಾಗಿ ಈ ಬಗ್ಗೆ ಗಮನಹರಿಸುವಂತೆ ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಎಇಇ, ಕರುಣಾಮಯಿ ರೈತ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಹುಬ್ಬೆಹುಣಸೆ ಡ್ಯಾಂಗೆ ತೆರಳಿದ ಶಾಸಕರು ಮಾಹಿತಿ ಪಡೆದು ನೀರಿನ ಮಟ್ಟವನ್ನು ವೀಕ್ಷಿಸಿದರು. ಅಚ್ಚುಕಟ್ಟು ಪ್ರದೇಶದ ನೀಲಿ ನಕಾಶೆಯನ್ನು ಪರಿಶೀಲಿಸಿದರು. ಬಳಿಕ ಬೈಕ್ ಏರಿ ಒಂಟಿ ಮಾಲಾಪುರದ ಮೂಲಕ ಎಲ್ಲೇಮಾಳದವರೆಗೂ ಹಾದು ಹೋಗಿರುವ ನಾಲೆಯನ್ನು ಸುಮಾರು 2 ಗಂಟೆಗಳ ಕಾಲ ಪರಿಶೀಲಿಸಿದರು. ಕೆಲವೆಡೆ ನಾಲೆ ದುರಸ್ತಿಗೊಂಡಿದ್ದನ್ನು ಗಮನಿಸಿದ ಶಾಸಕರು ರಿಪೇರಿ ಪಡಿಸುವಂತೆ ಹಾಗೂ ರೈತರು ಓಡಾಡಲು ಸಮಸ್ಯೆಯಾಗದಂತೆ ನಾಲೆ ಮೇಲ್ಭಾಗದಲ್ಲಿನ ರಸ್ತೆಯನ್ನು ಸಮತಟ್ಟು ಮಾಡಬೇಕು. ನಾಲೆಯ ಮೂಲಕ ಸಮರ್ಪಕವಾಗಿ ನೀರು ಹಾಯಿಸಲು ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗೆ ಸೂಚಿಸಿದರು.
ಇನ್ನು ಪಟ್ಟಣಕ್ಕೆ ಹೊಂದಿಕೊಂಡಂತೆ ಅಜ್ಜೀಪುರ ಮಾರ್ಗದಲ್ಲಿ ನಾಲೆಯ ಮೂಲಕ ಅವೈಜ್ಞಾನಿಕವಾಗಿ ಅಳವಡಿಸಿರುವ ಜಲಜೀವನ ಮಿಷನ್ ಯೋಜನೆಯ ಪೈಪ್‌ಲೈನ್ ಸರಿಪಡಿಸುವಂತೆ ಸೂಚಿಸಿದರು. ಈ ಕಾಮಗಾರಿಯಿಂದ ಹಾಳಾಗಿರುವ ನಾಲೆಯನ್ನೂ ಸರಿಪಡಿಸುವಂತೆ ಸೂಚಿಸಿದರು. ಈ ವೇಳೆ ಬೈಕ್‌ನಲ್ಲಿ ಸುಮಾರು 2 ಗಂಟೆಗಳ ಕಾಲ ಪ್ರದಕ್ಷಿಣೆ ಹಾಕಿ ಪರಿಶೀಲಿಸಿದ ಶಾಸಕರ ಕಾಳಜಿಯ ಬಗ್ಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿಗೆ ನೀರು:
ಈ ಸಂಬಂಧ ಶಾಸಕರು ಮಾಧ್ಯಮದವರೊಂದಿಗೆ ಮಾತನಾಡಿ, ಹುಬ್ಬೆಹುಣಸೆ ಡ್ಯಾಂ ಮೂಲಕ ರೈತರಿಗೆ ನೀರೊದಗಿಸುವ ಉದ್ದೇಶದಿಂದ ಕಳೆದ ನಾಲ್ಕೈದು ತಿಂಗಳ ಹಿಂದೆ ನಾಲೆಯಲ್ಲಿ ಸಂಗ್ರಹವಾಗಿದ್ದ ಹೂಳನ್ನು ತೆರೆವುಗೊಳಿಸಿ ಎಲ್ಲೇಮಾಳದ ರಸ್ತೆಯವರೆಗೂ ನೀರನ್ನು ಹರಿಸಲಾಗಿತ್ತು. ರೈತರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದರು. ಇನ್ನು ಮಳೆಗಾಲದ ವೇಳೆ ತಟ್ಟೆಹಳ್ಳದ ಮೂಲಕ ನೀರು ಹರಿದು ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಈ ಭಾಗದಲ್ಲಿ ಅಂತರ್ಜಲ ಮಟ್ಟವನ್ನು ಸುಧಾರಿಸುವ ಸಲುವಾಗಿ ನಾಲೆಯನ್ನು ರಿಪೇರಿಗೊಳಿಸಿ ನೀರನ್ನು ಹರಿಸಲು ನಿರ್ಧರಿಸಲಾಗಿದೆ. ಇನ್ನು ನಾಲೆಯಿಂದ ಅರಕನಹಳ್ಳಕ್ಕೆ ನೀರು ಹರಿಸಿದರೆ ವೈಶಪಾಳ್ಯ ದೊಡ್ಡಕೆರೆ ನೀರು ತುಂಬಿಸುವಂತೆ ರೈತರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದು, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕ್ಷೇತ್ರದ ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯವನ್ನು ಒದಗಿಸುವ ಸಂಬಂಧ ಈಗಾಗಲೇ ಯೋಜನೆಯೊಂದನ್ನು ರೂಪಿಸಿದ್ದು, ಅಚ್ಚುಕಟ್ಟು ಪ್ರದೇಶದ ಸರ್ವೇ ಕಾರ್ಯ ನಡೆಯುತ್ತಿದೆ. ಡಿಪಿಆರ್ ಬಳಿಕ ಈ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ. ರೈತರ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಪಿಎಸಿಸಿ ನಿರ್ದೇಶಕ ಲಿಂಗೇಗೌಡ, ಮುಖಂಡರಾದ ಗೋವಿಂದ, ಚಿನ್ನತಂಬಿ, ಬಾಲು, ಚಿನ್ನವೆಂಕಟ, ಎಸ್.ಆರ್.ಮಹದೇವ, ವೆಂಕಟೇಶ್, ಮಲ್ಲೇಗೌಡ ಹಾಗೂ ಇನ್ನಿತರರು ಇದ್ದರು.