ಜಿಲ್ಲೆ

ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಯಿಂದ ಚಿನ್ನದ ಸರ ಕಳವು

ಹಾಸನ: ವಿಳಾಸ ಕೇಳುವ ನೆಪದಲ್ಲಿ ಬಂದ ವ್ಯಕ್ತಿ, ಬೈಕಿನ ಹಿಂದೆ ಕುಳಿತುಕೊಂಡು ಹೋಗುತ್ತಿದ್ದ ಹೆಂಗಸಿನ ಕೊರಳಿನಲ್ಲಿದ್ದ ಸುಮಾರು

1.60 ಲಕ್ಷ ಮೌಲ್ಯದ 40 ಗ್ರಾಂ.ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಶಾಂತಿಗ್ರಾಮ ಹೋಬಳಿ ಉಳುವಾರೆ ಗ್ರಾಮದ ಸುಶೀಲಮ್ಮ ಎಂಬುವರು ನ.10 ರಂದು ಹಾಸನ ಕುವೆಂಪುನಗರದ ಸಂಬಂಧಿಕರ ಬೀಗರ ಊಟ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪತಿ ಶ್ರೀನಿವಾಸ ಅವರೊಂದಿಗೆ ಬೈಕಿನಲ್ಲಿ ಬೆಳಿಗ್ಗೆ 10.50ರ ಸುಮಾರಿಗೆ ಮನೆಯಿಂದ ಹೊರಟು ಕೆಂಚಟ್ಟಹಳ್ಳಿ ಮಾರ್ಗವಾಗಿ ನಗರದಕ್ಕೆ ಹೋಗುತ್ತಿದ್ದರು.

ಕೆ.ಹಿರಿಹಳ್ಳಿ, ದೊಡ್ಡಗೇಣಿಗೆರೆ ಮಾರ್ಗವಾಗಿ ಚಿಗಳ್ಳಿ ಬಾರೆ ಸಮೀಪದ ರಸ್ತೆಯಲ್ಲಿ ಬರುತ್ತಿದ್ದಾಗ ಇವರ ಬೈಕಿನ ಹಿಂದೆಯೇ ಬಂದ ಅಪರಿಚಿತ ವ್ಯಕ್ತಿ, ಈ ರಸ್ತೆ ದೊಡ್ಡ ಆಲದಹಳ್ಳಿ ಕಡೆ ಹೋಗುತ್ತದೆಯೇ ಎಂದು ವಿಳಾಸ ಕೇಳಿದ. ಸುಶೀಲಮ್ಮ ವಿವರಣೆ ನೀಡುತ್ತಿದ್ದಾಗ ಅವರ ಕೊರಳಿನಲ್ಲಿದ್ದ ಎರಡೆಳೆಯ ಚಿನ್ನದ ಸರವನ್ನು ತಾಳಿ ಸಮೇತ ಕಿತ್ತು ಖದೀಮ ಪರಾರಿಯಾಗಿದ್ದಾನೆ. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 42 ಗ್ರಾಂ ತೂಕದ ಚಿನ್ನದ ಸರ ಹಾಗೂ 45 ಸಾವಿರ ರೂ. ಹಣ ಕಳವು ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಬೆಟ್ಟದಮನೆ ಗ್ರಾಮದ ಸುಶೀಲಮ್ಮ ಎಂಬುವರು ಆರೋಗ್ಯ ಸರಿಯಿಲ್ಲದ ಕಾರಣ ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆದು ವಾಪಸ್ ಊರಿಗೆ ಹೋಗಲು ನ.9 ರಂದು ಮಧ್ಯಾಹ್ನ ಹಾಸನದಲ್ಲಿ ಬೇಲೂರಿಗೆ ಹೋಗುವ ಬಸ್ ಹತ್ತಿಕೊಂಡು ಬೇಲೂರಿಗೆ ಬಂದಿಳಿದರು. ಆಗ ನೋಡಿದಾಗ ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 42 ಗ್ರಾಂ ತೂಕದ ಚಿನ್ನದ ಸರ ಹಾಗೂ 45 ಸಾವಿರ ನಗದು ಇರಲಿಲ್ಲ. ಸುಶೀಲಮ್ಮ ಅವರು ನೀಡಿದ ದೂರಿನ ಮೇರೆಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.