ಹಾಸನ: ಸ್ನೇಹಿತರೆಲ್ಲರು ಒಂದೇ ಬೈಕಿನಲ್ಲಿ ಸಕಲೇಶಪುರದ ಪ್ರವಾಸಿತಾಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ನಗರದ ಸಂತೆಪೇಟೆ ಸರ್ಕಲ್ ಬಳಿ ಶುಕ್ರವಾರ ಲಾರಿ ಡಿಕ್ಕಿ ಹೊಡೆದು ಓರ್ವ ವಿದ್ಯಾರ್ಥಿ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಹಾಸನ ತಾಲೂಕಿನ ಚಿಕ್ಕಕಡಲೂರು ಗ್ರಾಮದ ಅಭಿಲಾಷ್ (22) ಮೃತ ವಿದ್ಯಾರ್ಥಿ. ದೊಡ್ಡಪುರ ಗ್ರಾಮದ ರಘು ಮತ್ತು ವರುಣ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಅಭಿಲಾಷ್, ರಘು, ವರುಣ್ ಎಂಬುವವರು ಬೈಕಿನಲ್ಲಿ ಸಕಲೇಶಪುರದ ಸುತ್ತಮುತ್ತ ತಿರುಗಾಡಿಕೊಂಡು ಬರಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸಂತೆಪೇಟೆ ಸರ್ಕಲ್ ಬಳಿ ಲಾರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಅಪಘಾತದ ರಭಸಕ್ಕೆ ಅಭಿಲಾಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಘು ಕಾಲು ಮುರಿದಿದ್ದು, ವರುಣ್ ತಲೆಗೆ ಗಾಯಗಳಾಗಿದ್ದು, ತಕ್ಷಣವೇ ಇವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.