ಜಿಲ್ಲೆ

ಬೇಸಿಗೆಯೊಳಗೆ ಎಂವಿಎ ಕಾಮಗಾರಿ ಪೂರ್ಣ

ಬೇಲೂರು: ನನ್ನ ಪರಿಶ್ರಮದಿಂದ ತಾಲೂಕಿನ ಗೆಂಡೇಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ 1್ಡ20 ಎಂವಿಎ ಕಾಮಗಾರಿಗೆ ಟೆಂಡರ್ ಕರೆದಿದ್ದು, ಮುಂದಿನ ಬೇಸಿಗೆಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಎಐಸಿಸಿ ಸದಸ್ಯ ಹಾಗೂ ಮಾಜಿ ಸಚಿವ ಬಿ.ಶಿವರಾಮ್ ಹೇಳಿದರು.

ಮಲೆನಾಡು ಭಾಗದ ಜನರ ಬಹಳ ವರ್ಷಗಳ ಬೇಡಿಕೆಯಾದ ಈ ಕಾಮಗಾರಿಯ ಬಗ್ಗೆ ನಾನು ಹೆಚ್ಚಿನ ಗಮನ ನೀಡಿ, ಸರ್ಕಾರ ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಟೆಂಡರ್ ಕರೆಸಿದ್ದೇನೆ. ಬಿಕ್ಕೋಡು ಮತ್ತು ಹನಿಕೆ ವಿದ್ಯುತ್ ಉಪಕೇಂದ್ರ ಸ್ಥಾಪನೆಗೂ ಕೂಡ ಮಾತನಾಡಿದ್ದೇನೆ. ತಾಲೂಕಿನ ಗೆಂಡೇಹಳ್ಳಿಯಲ್ಲಿ ಹೆಚ್ಚುವರಿಯಾಗಿ ನಿರ್ಮಾಣವಾಗುತ್ತಿರುವ 1್ಡ20 ಎಂ.ವಿ.ಎ ಇಂದಾಗಿ ಸುತ್ತ ಮುತ್ತಲಿನ ಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಸಹಕಾರಿಯಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದು ವಿದ್ಯುತ್ ಪರಿವರ್ತಕ ವಿಫಲವಾದರೆ ಮತ್ತೊಂದು ಬ್ಯಾಕ್‌ಅಪ್ ಆಗಿ ಬಳಸಲು ಇದು ಸಹಾಯವಾಗುತ್ತದೆ. ಶಾಸಕರಿಗೆ ಅನುಭವದ ಕೊರತೆ ಇದೆ. ನಗರೋತ್ಥಾನದಲ್ಲಿ ಬಂದ 7.5 ಕೋಟಿ ರೂ.ಅನುದಾನವನ್ನು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಕೆಲಸಕ್ಕೆ ಬಳಸಬಾರದು. ಪುರಸಭೆಯ 23 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ವ್ಯಾಪ್ತಿಯಲ್ಲಿ ಅವಶ್ಯವಿರುವಲ್ಲಿ ಕೆಲಸ ಮಾಡಿಸಬೇಕು. ಇದನ್ನು ಬಿಟ್ಟು ಸ್ವಾತಂತ್ರ್ಯ ದಿನಾಚರಣೆ ದಿನ ಈ ಬಗ್ಗೆ ಭಾಷಣ ಮಾಡಲು ಹೋಗಿರುವುದು ಎಷ್ಟು ಸರಿ ಎಂದು ವ್ಯಂಗ್ಯವಾಡಿದ ಅವರು ಪುರಸಭೆ ಹಿಂದಿನ ಅಧ್ಯಕ್ಷ ಹೆಂಗೋ ಸುಮ್ಮನಿದ್ದರು. ಅವನನ್ನು ಶಾಸಕರು ಕರೆದುಕೊಂಡು ಹೋಗಿ ಜೇೀಬಿಗೆ ಇಟ್ಟು ಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ವರ್ಗಾವಣೆ ಮಾಡಿಸುವುದರಲ್ಲಿ ನೀವು ನಿರತರಾಗಿದ್ದೀರಿ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದ ಬಿ.ಶಿವರಾಂ, ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಎಲ್ಲೆಲ್ಲೋ ಇದ್ದ ನೂರಾರು ಶಿಕ್ಷಕರನ್ನು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದೆ. ಆಯಾ ಸರ್ಕಾರದ ಅವಧಿಯಲ್ಲಿ ಅವರ ಪಕ್ಷಗಳ ಮುಖಂಡರು ವಾರ್ಗಾವಣೆ ಮಾಡಿಸುವುದು ಸಾಮಾನ್ಯ. ನಾನು ವರ್ಗಾವಣೆ ದಂಧೆಯಲ್ಲಿ ತೊಡಗಿಲ್ಲ. ಯಾರಿಂದಲೂ ಹಣ ಪಡೆದಿಲ್ಲ. ಶಾಸಕರು ಬೇಕಿದ್ದರೆ ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸಲಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್, ಕಸಬಾ ಹೋಬಳಿ ಅಧ್ಯಕ್ಷ ಗೆಂಡೇಹಳ್ಳಿ ಶ್ರೀನಿವಾಸ್, ಕಿಸಾನ್ ಘಟಕದ ಉಪಾಧ್ಯಕ್ಷ ಮಲ್ಲೇಶ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸಚ್ಚಿನ್ ಇದ್ದರು.