ಬಾಗಲಕೋಟೆ: ಪ್ರಸಕ್ತ ವರ್ಷ ಬೇಸಿಗೆ ಅವಽಯಲ್ಲಿ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇರಲ್ಲ. ವಿದ್ಯುತ್ ಕೊರತೆ ಉಂಟಾದರೆ ಬೇರೆ ಕಡೆಯಿಂದ ಖರೀದಿ ಮಾಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಜನರಿಗೆ ಅಭಯ ನೀಡಿದ್ದಾರೆ.
ಬಾಗಲಕೋಟೆ ಹೆಲಿಪ್ಯಾಡ್ ನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ವರ್ಷ ರಾಜ್ಯದಲ್ಲಿ ಭೀಕರ ಬರ ಇತ್ತು. ನೀರಿನ ಕೊರತೆ ಇದ್ದಾಗ್ಯೂ ನಾವು ಪವರ್ ಕಟ್ ಮಾಡಲಿಲ್ಲ. ಬೇಡಿಕೆ ಬಂದ ಕೂಡಲೇ ನಾನು, ನಮ್ಮ ಸಿಎಂ ಸೇರಿ ಅಗತ್ಯ ವಿದ್ಯುತ್ ಪೂರೈಸುವ ಕೆಲಸ ಮಾಡಿದ್ದೇವು ಎಂದರು.
ಈಗಲೂ ಸಹ ಬೇಸಿಗೆಯಲ್ಲಿ ನಾವು ತಮ್ಮ ಅಽಕಾರಿಗಳು ಸೇರಿ ಪರಿಸ್ಥಿತಿಗೆ ಅನುಸಾರವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ರಾಜ್ಯದಲ್ಲಿ ೧೬ ರಿಂದ ೧೮ ಸಾವಿರ ಮೆಗಾವ್ಯಾಟ್ ಬೇಡಿಕೆ ಇದೆ. ಕೊರತೆ ಉಂಟಾದರೆ ಬೇರೆ ಕಡೆ ಖರೀದಿ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆಡಳಿತ ಮತ್ತು ವಿಪಕ್ಷ ಎರಡರಲ್ಲೂ ಸಾಕಷ್ಟು ರಾಜಕೀಯ ಹಗ್ಗಾಜಗ್ಗಾಟ ನಡೆದಿದ್ದು, ನಿಮ್ಮ ನಡುವೆ ಜನಸಾಮಾನ್ಯರ ಸ್ಥಿತಿ ಏನು ಎನ್ನುವ ಸುದ್ದಿಗಾರರ ಪ್ರಶ್ನೆಗೆ, ನಮ್ಮ ಆಡಳಿತ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಟೀ ಕಪ್‌ನಲ್ಲಿ ಬಿರುಗಾಳಿ ಬಂದಿರುವ ರೀತಿಯಲ್ಲಿ ಮಾಡುತ್ತಿದ್ದೀರಿ ಎಂದು ತಮ್ಮ ಪಕ್ಷದ ಕೆಸರೆರಚಾಟವನ್ನು ಮಾಧ್ಯಮಗಳ ಕಡೆಗೆ ಬೊಟ್ಟು ಮಾಡಿದರು.
ನಮ್ಮದು ಪ್ರಜಾಪ್ರಭುತ್ವ ಇರುವ ಪಕ್ಷ. ಪಕ್ಷದ ಒಳಗಡೆ ಚರ್ಚಿಸುತ್ತೇವೆ. ಹೊರಗಡೆ ಮಾಡುವುದು ನಮಗೆ ಹೈಕಮಾಂಡ್ ಇದೆ, ಮುಖ್ಯಮಂತ್ರಿಗಳು ಇದ್ದಾರೆ. ಅವರು ಕೂತುಕೊಂಡು ಬಗೆಹರಿಸುತ್ತಾರೆ ಎಂದರು.
ಡಿನ್ನರ್ ಮೀಟಿಂಗ್ ಇವತ್ತಿಂದು ಅಲ್ಲ. ನಾನು ನಾಳೆ ಡಿನ್ನರ್ ಕರೆದರೆ ಅದರಲ್ಲಿ ಏನು ತಪ್ಪು? ನೀವು(ಮಾಧ್ಯಮದವರು) ಡಿನ್ನರ್ ಪಾರ್ಟಿ ಮಾಡಲ್ವಾ? ಅದರಲ್ಲೂ ರಾಜಕೀಯ ಇರುತ್ತಾ? ಇದೆಲ್ಲ ನೀವು ಊಹಿಸುತ್ತೀರಿ, ಅದರಲ್ಲಿ ತಪ್ಪಿಲ್ಲ. ಈಗ ನಿಮಗೆ ಹೆಚ್ಚೆಚ್ಚು ಸುದ್ದಿಬೇಕು, ಅದಕ್ಕೆ ಹೀಗೆ ಮಾಡುತ್ತಿದ್ದೀರಿ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.