ಜಿಲ್ಲೆ

ಬೇಸಿಗೆಯಲ್ಲಿ ನೀರಿನ ತೊಂದರೆ ಆಗದಿರಲಿ ; ತಾಪಂ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಡಾ.ಜಿ.ಪರಮೇಶ್ವರ್

Tumakuru

ಕೊರಟಗೆರೆ : ತಾಲೂಕಿನ ಎಲ್ಲ ಗ್ರಾಪಂಗೆ ನಮ್ಮ ನಿಧಿಯಲ್ಲಿ ಶೇ.50ನ್ನು ಕುಡಿಯುವ ನೀರಿಗೆ ಆದ್ಯತೆಯಾಗಿ ಮೀಸಲಿಡಬೇಕು, ಬೇಸಿಗೆಯಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ಶಾಸಕ ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಸೋಮವಾರ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ತಯಾರಿಸಬೇಕು, ನೀರಿನ ಶಾಶ್ವರ ವ್ಯವಸ್ಥೆಗೆ ಏನು ಕ್ರಮಕೈಗೊಳ್ಳಬಹುದು ಎಂಬುದಕ್ಕೆ ಯೋಜನೆ ತಯಾರಿಸಿಕೊಂಡಿರಬೇಕು, ಬೇಡಿಕೆ ಇರುವ 24 ಕೊಳವೆಬಾವಿಗೆ ಅನುದಾನ ಕೇಳಿ ಪಡೆಯಿರಿ ಎಂದರು.

ಸಭೆಯಲ್ಲಿ ಸರಿಯಾದ ಮಾಹಿತಿ ನೀಡಲು ಪರದಾಡಿದ ತಾಪಂ ಇಒ ವಿರುದ್ಧ ಪರಮೇಶ್ವರ್ ಗರಂ ಆದರು. ನೀನು ಏನು ಮಾಡುತ್ತಿದ್ದೀಯಾ ಪ್ರಗತಿ ಪರಿಶೀಲನಾ ಸಭೆಗೆ ಇಲಾಖೆಗಳು ಸಮರ್ಪಕ ಮಾಹಿತಿ ನೀಡಿಲ್ಲ, ಇದನ್ನು ಇಟ್ಟುಕೊಂಡು ನಾನು ಏನು ಪ್ರಗತಿ ಪರಿಶೀಸಲು ಸಾಧ್ಯ ? ಎಲ್ಲರೂ ಸಮರ್ಪಕ ಮಾಹಿತಿ ನೀಡಬೇಕು ಎಂದು ಬೈದರು.

ತಾಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದರೂ ನನ್ನ ಗಮನಕ್ಕೆ ತಂದಿಲ್ಲ, ಕೋಳಾಲ ಹೋಬಳಿ ಐ.ಕೆ ಕಾಲನಿ ಕೆರೆಯಲ್ಲಿ 45 ಕೋಟಿ ರೂ. ಕೆಲಸ ನಡೆಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳಿಗೆ ಗೊತ್ತಿಲ್ಲ, ಶಾಸಕನಾಗಿ ನನಗೂ ಗೊತ್ತಿಲ್ಲ, ನಾಳೆಯಿಂದಲೇ ಕಾಮಗಾರಿ ನಿಲ್ಲಿಸಿಡುತ್ತೇವೆ ಏನೂ ಮಾಡುತ್ತೀರಾ ಎಂದು ಗುಡುಗಿದರು.

122 ಕೋಟಿ ರೂ. ರೈತರ ಪರಿಹಾರ ಹಣ ಬಂದಿದೆ ಎಂದು ಜಿಲ್ಲಾಡಳಿತ ಹೇಳಿದೆ, ನನ್ನ ತಾಲೂಕಿನ ಯಾವೊಬ್ಬ ರೈತರಿಗೂ ನೀವು ನೀಡಿಲ್ಲ, ಗುತ್ತಿಗೆದಾರೊಂದಿಗೆ ಶಾಮೀಲಾಗಿ ಗೋಲ್‌ಮಾಲ್ ಮಾಡುತ್ತಿದ್ದೀರಾ ? ನಮ್ಮ ಭಾಗಕ್ಕೆ ನೀರು ಬರುತ್ತೇ ಅಂತಾ ನಿಮ್ಮನ್ನು ಸಹಿಸಿಕೊಳ್ಳುತ್ತಿದ್ದೇವೆ, ರೈತರಿಗೆ ಅನ್ಯಾಯ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದರು.

ಗೋಕಟ್ಟೆ ಹೇಗಿರುತ್ತೆ? ಹೇಗೆ ಮಾಡುತ್ತೀರಾ? ತಾಲೂಕಿನಲ್ಲಿ ಎಲ್ಲೆಲ್ಲಿ ಮಾಡಿದ್ದೀರಾ? ಇದರ ಉಪಯೋಗ ಏನು? ಎಂದು ತಾಪಂ ಎಡಿಎ ನಾಗರಾಜುಗೆ ಪರಮೇಶ್ವರ್ ಪ್ರಶ್ನಿಸಿದರು. ಇದಕ್ಕೆ ತಬ್ಬಿಬ್ಬಾದ ಅಧಿಕಾರಿ, ಗೋಕಟ್ಟೆ ಮಾಡಿರುವ ಎಲ್ಲ ಮಾಹಿತಿ ನೀಡಿ ನೀವು ನರೇಗಾ ಕಾಮಗಾರಿಯಲ್ಲಿ ನೀಡಿರುವ ಮಾಹಿತಿಯಲ್ಲಿ ಒಂದು ಕಡೆ 15 ಕೋಟಿ ಮತ್ತೊಂದು ಕಡೆ 17 ಕೋಟಿ ಎಂದು ತಿಳಿಸುತ್ತೀರಾ 2 ಕೋಟಿ ರೂ.ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್‌ಕುಮಾರ್ ಕಾರ್ಯವೈಖರಿಗೆ ಸಿಟ್ಟಾದ ಶಾಸಕರು, ಅಮಾನತಿನಲ್ಲಿ ಇಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ಬಿ.ಕೆ.ವೆಂಕಟಪ್ಪ, ತಾಪಂ ಇಒ ಶಿವಪ್ರಕಾಶ್ ಮತ್ತಿತರರು ಇದ್ದರು.

ತೋಟಗಾರಿಕೆ ಇಲಾಖೆಯಲ್ಲಿ ಅಕ್ರಮ: ತೋಟಗಾರಿಕೆ ಇಲಾಖೆ ಅಕ್ರಮದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಜೋನಿಗರಹಳ್ಳಿಯ ದೊಡ್ಡರಂಗಮ್ಮ ಟ್ರ್ಯಾಕ್ಟರ್ ಸಬ್ಸಿಡಿ ನೀಡುವಲ್ಲಿ ಕೇಳಿಬಂದಿರುವ ಅವ್ಯವಹಾರದ ಬಗ್ಗೆ ಶಾಸಕರು ತರಾಟೆಗೆ ತೆಗೆದುಕೊಂಡರು. ಸಹಾಯಕ ನಿರ್ದೇಶಕಿ ಪುಷ್ಪಲತಾ ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಲಾನುಭವಿಗೆ ತಿಳಿಯದಂತೆ ಟ್ರ್ಯಾಕ್ಟರ್ ಸಬ್ಸಿಡಿ ನೀಡಲಾಗಿದೆ ಎಂಬ ಆರೋಪ ದಾಖಲೆಯ ಸಮೇತ ರೈತ ಮುಖಂಡರು ಮಾಡಿದ್ದು ಈ ಬಗ್ಗೆ ತನಿಖೆ ನಡೆದು ಸತ್ಯ ಹೊರಬರಬೇಕಿದೆ.

ತಾಲೂಕಿನಲ್ಲಿ ರೇಷ್ಮೆ, ಮೀನುಗಾರಿಕೆ, ತೋಟಗಾರಿಕೆ ಇಲಾಖೆ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಕಾನೂನು ಮೀರಿ ನಡೆದುಕೊಳ್ಳುತ್ತಿವೆ, ಶಾಸಕ ಸೂಚಿಸಿದ ಫಲಾನುಭವಿ ಅನರ್ಹ ಎಂದು ನಿಮಗೆ ಇಷ್ಟಬಂದವರಿಗೆ ನೀಡುತ್ತಿದ್ದೀರಾ? ಸೌಜನ್ಯಕ್ಕಾದರೂ ನನ್ನ ಗಮನಕ್ಕೆ ತಂದಿಲ್ಲ. ನನ್ನ ಒಳ್ಳೆಯತನ ದುರುಪಯೋಗವಾದರೆ ನಾನೂ ಬದಲಾಗಬೇಕಾಗುತ್ತದೆ. ಡಾ.ಜಿ.ಪರಮೇಶ್ವರ್ ಶಾಸಕ