ಚಿತ್ರದುರ್ಗ: ಮಕ್ಕಳ ಶಿಬಿರಗಳು ಕೇವಲ ಮೋಜಿನ ಚಟುವಟಿಕೆಗಳಿಗೆ ಸೀಮಿತವಾಗಿರದೆ, ಜೀವನಕ್ಕೆ ಉಪಯುಕ್ತ ಮೌಲ್ಯಗಳು ಮತ್ತು ಕೌಶಲಗಳನ್ನು ಕಲಿಸುತ್ತವೆ ಎಂದು ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಹೇಳಿದರು.
ನಗರದ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ 10 ದಿನಗಳ ಬಾಲಗೋಕುಲ ಮಕ್ಕಳ ಬೇಸಿಗೆ ಶಿಬಿರ ಸಮಾರೋಪದಲ್ಲಿ ಮಾತನಾಡಿ, ರಜಾ ವೇಳೆ ಮೊಬೈಲ್, ಟಿವಿ ಗೀಳಿನಿಂದ ಮಕ್ಕಳನ್ನು ದೂರವಿಟ್ಟು ಇಂತಹ ಶಿಬಿರಗಳಿಗೆ ಸೇರಿಸಬೇಕು ಎಂದರು.
ಮಕ್ಕಳು ಹೊಸ ಕೌಶಲಗಳನ್ನು ಕಲಿಯಲು, ಇತರ ಮಕ್ಕಳೊಡನೆ ಸ್ನೇಹ ಬೆಳೆಸಲು, ಸಂಪನ್ಮೂಲ ವ್ಯಕ್ತಿಗಳಿಂದ ಮೌಲ್ಯಯುತ ವಿಚಾರ, ಆಟೋಟಗಳನ್ನು ಕಲಿತುಕೊಳ್ಳಲು ಸಹಕಾರಿಯಾಗುತ್ತದೆ. ಶಿಬಿರಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಿದ ನಿವೃತ್ತ ಪೋಲಿಸ್ ಅಧಿಕಾರಿ ಕೆ.ಮಲ್ಲಿಕಾರ್ಜುನಾಚಾರ್ ಮಾತನಾಡಿ, ಗುರುಗಳನ್ನು ಗೌರವಿಸುವ ವಿದ್ಯಾರ್ಥಿಗಳ ಜೀವನದಲ್ಲಿ ಸೋಲು ಎಂಬುದು ಇರುವುದಿಲ್ಲ ಎಂದರು.
ಹಿರಿಯ ಯೋಗ ಸಾಧಕಿ ವನಜಾಕ್ಷಮ್ಮ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಭಾವಸಾರ ಕ್ಷತ್ರಿಯ ಸಮಾಜದ ಮಹಿಳಾ ಮಂಡಳಿ ಅಧ್ಯಕ್ಷೆ ಮಮತಾ ಬೇದ್ರೆ, ಚಿತ್ರ ಕಲಾವಿದೆ ಅರುಣಾ, ಯೋಗ ಸಾಧಕರಾದ ತಿಪ್ಪಮ್ಮ, ರೇಣುಕಾ, ದುರ್ಗಾಂಬಿಕಾ, ಸರಸ್ವತಿ ಇತರರಿದ್ದರು. ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್ ಸ್ವಾಗತಿಸಿದರೆ, ಶಿಬಿರದ ಸಂಯೋಜಕಿ ನಾಗಲತಾ ಮಾತಾಜೀ ನಿರೂಪಿಸಿದರು.