ಜಯಪುರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1878ನೇ ಮದ್ಯವ್ಯರ್ಜನ ಶಿಬಿರದಲ್ಲಿ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿಧಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಮೂರ್ತಿ ಶೆಟ್ಟಿ, ಮನೋಹರ್, ಎಚ್.ಎಂ.ಸತೀಶ್, ಡಿ.ಬಿ.ರಾಜೇಂದ್ರ ಇತರರಿದ್ದರು. 
ಜಿಲ್ಲೆ

ಬೇಸರವೆಂದು ಮದ್ಯ ಸೇವಿಸುವುದು ದೊಡ್ಡ ಅಪರಾಧ

ಎಸ್.ಎನ್.ರವೀಂದ್ರ

ಜಯಪುರ: ಮದ್ಯವರ್ಜನ ಶಿಬಿರಾರ್ಥಿಗಳಿಗೆ ಜೀವನದಲ್ಲಿ ಯಾವಾಗಲಾದರೂ ಬೇಸರವಾದರೆ ಹರಿಹರಪುರ ಮಠಕ್ಕೆ ಬನ್ನಿ, ಮನಸ್ಸು ಶಾಂತಿಯಾಗಬಹುದು. ಮಠಕ್ಕೆ ಬರಲು ನಿಮಗೆ ಮನಸ್ಸಾಗದಿದ್ದರೆ ನಮಗೆ ಹೇಳಿ ಕಳುಹಿಸಿ. ನಾನೇ ನಿಮ್ಮ ಮನೆಗೆ ಬರುತ್ತೇನೆ. ನಿಮ್ಮ ಮನಸ್ಸಿನ ಅಶಾಂತಿ ಸರಿಪಡಿಸುತ್ತೇನೆ. ಆದರೆ ದಯವಿಟ್ಟು ಜೀವನದಲ್ಲಿ ಬೇಸರಕ್ಕಾಗಿ ಮದ್ಯ ಸೇವನೆಯಂಥ ಅಪರಾಧ ಎಂದೂ ಮಾಡಬೇಡಿ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1878ನೇ ಮದ್ಯವ್ಯರ್ಜನ ಶಿಬಿರದಲ್ಲಿ ಆಶೀರ್ವಚನ ನೀಡಿದ ಅವರು, ಜೀವನದಲ್ಲಿ ನಡೆಯುವ ನೂರಾರು ತಪ್ಪುಗಳಿಗೆ ಮದ್ಯಪಾನವೇ ಪ್ರಧಾನ ಕಾರಣ. ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದು ಎರಡೂ ಇದೆ. ನಾವು ಒಳ್ಳೆಯದನ್ನೇ ಆರಿಸಿಕೊಳ್ಳಬೇಕು. ಮಾಡಿರುವ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಪಶ್ಚಾತ್ತಾಪದ ಮೂಲಕ ತಿದ್ದಿಕೊಳ್ಳಬೇಕು ಎಂದು ಹೇಳಿದರು.

ಗೊತ್ತುಗುರಿ ಇಲ್ಲದ ಜೀವನದಲ್ಲಿ ನಮ್ಮದು ಅನಿಶ್ಚತತೆಯ ಪ್ರಯಾಣ. ಯಾವ ಕ್ಷಣದಲ್ಲಾದರೂ ನಮ್ಮ ಪ್ರಯಾಣ ಕೊನೆಗೊಳ್ಳಬಹುದು. ಹಾಗಾಗಿ ಜೀವನದ ನಡಿಗೆಯಲ್ಲಿ ಪ್ರತಿ ಕ್ಷಣವೂ ಎಚ್ಚರಿಕೆಯ ಹೆಜ್ಜೆ ಇಡಬೇಕು. ನಮಗೆ ಯಾವ ಕಾರ್ಯವೂ ಸಹ್ಯವಲ್ಲವೋ ಅಂಥ ಕಾರ್ಯವನ್ನು ಎಂದಿಗೂ ಮಾಡಬಾರದು. ಜಾತಿ, ಮತ, ಆರ್ಥಿಕತೆ, ವಿದ್ಯಾಭ್ಯಾಸ ಹಾಗೂ ಅಧಿಕಾರದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಹೇಳಿದರು.

ಸರ್ಕಾರದ ಆಡಳಿತಕ್ಕೂ ಅದರ ಧ್ಯೇಯ ವಾಕ್ಯಗಳ ಅನುಷ್ಠಾನಕ್ಕೂ ಬಹಳ ವೈರುಧ್ಯವಿದೆ. ಅದು ಬದಲಾಗಬೇಕು. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬೋರ್ಡ್ ಹಾಕುವ ಸರ್ಕಾರ, ಬೀದಿ ಬೀದಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದೆ. ಇದು ಸರಿಯಲ್ಲ. ಸನಾತನ ಸಂಸ್ಕೃತಿಯಲ್ಲಿ ಕತ್ತಲೆಯಿಂದ ಬೆಳೆಕಿನೆಡೆಗೆ ಮಾನವನ ಜೀವನ ಸಾಗಬೇಕು ಎಂದು ಋಷಿಮುನಿಗಳ ಹೇಳಿದ್ದಾರೆ. ಆದ್ದರಿಂದ ಮಾಡಿರುವ ತಪ್ಪನ್ನು ಮರೆತು, ಅಂತರಂಗದಲ್ಲಿ ಅರಿವಿನ ಬೆಳಕು ಮೂಡಿಸಿಕೊಂಡು ಬದುಕು ರೂಪಿಸಿಕೊಳ್ಳಿ ಎಂದರು.

ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಮಾತನಾಡಿ, ಶಿಬಿರದಲ್ಲಿ 20 ರಿಂದ 60 ವರ್ಷ ವಯಸ್ಸಿನ ಅನಕ್ಷರಸ್ಥರಿಂದ ಹಿಡಿದು ಪದವಿ, ಸ್ನಾತಕೋತ್ತರ ಪದವೀಧರರು ಹಾಗೂ ಕುಡಿತದಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ 39 ಜನ, ಮದ್ಯವ್ಯಸನದಿಂದ ಜೈಲುವಾಸ ಅನುಭವಿಸಿದ 15 ಜನ ಶಿಬಿರದಲ್ಲಿದ್ದಾರೆ. ಒಟ್ಟು 88 ಜನರಲ್ಲಿ ಅನೇಕರು ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ಅಧ್ಯಕ್ಷರಾದವರು, ಗ್ರಾಪಂ ಸದಸ್ಯರಾದವರು ಪಾಲ್ಗೊಂಡಿದ್ದಾರೆ. ಇವರೆಲ್ಲರ ಮನ ಪರಿವರ್ತನೆಗೆ ಶ್ರೀ ಮಂಜುನಾಥ ಸ್ವಾಮಿ ಅವಕಾಶ ನೀಡಿರುವುದು, ಅದನ್ನು ಶಿಭಿರಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಯೋಜನಾಧಿಕಾರಿ ಶ್ರೀಮೂರ್ತಿ ಶೆಟ್ಟಿ, ಸಂಸ್ಥೆಯ ಮನೋಹರ್, ಶಿಬಿರಾಧ್ಯಕ್ಷ ಎಚ್.ಎಂ.ಸತೀಶ್, ಡಿ.ಬಿ.ರಾಜೇಂದ್ರ ಇತರರಿದ್ದರು.