ಗುಂಡ್ಲುಪೇಟೆ: ತಾಲೂಕಿನ ಮಳವಳ್ಳಿ ಗ್ರಾಮದ ಜಮೀನಿನಲ್ಲಿ ಬೇವಿನ ಮರದಿಂದ ಹಾಲು ಉಕ್ಕಿ ಬರುತ್ತಿದ್ದು, ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಗುಂಪುಗೂಡುತ್ತಿದ್ದಾರೆ. ದೈವದ ಮಹಿಮೆ ಎಂದು ಭಾವಿಸಿದ ಭಕ್ತರು ಮರಕ್ಕೆ ಪೂಜೆ ಸಲ್ಲಿಸಿ ಸಮೀಪದಲ್ಲಿ ಗೋಲಕ ಇಟ್ಟು ಕಾಣಿಕೆ ಹಾಕುತ್ತಿದ್ದಾರೆ.
ಗ್ರಾಮದ ಸೀನಯ್ಯ ಎಂಬುವವರ ಜಮೀನಿನ ಅಂಚಿನಲ್ಲಿರುವ ಬೇವಿನ ಮರದಲ್ಲಿ ಕಳೆದ 15 ದಿನಗಳಿಂದಲೂ ಸಣ್ಣ ಪ್ರಮಾಣದಲ್ಲಿ ಜಿನುಗುತ್ತಿದ್ದ ಬಿಳಿ ದ್ರವ ಇತ್ತೀಚೆಗೆ ಹೆಚ್ಚಾಗಿದೆ. ಇದನ್ನು ಕಂಡ ದಾರಿಹೋಕರು ತಮ್ಮ ಮೊಬೈಲುಗಳಲ್ಲಿ ಚಿತ್ರ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪರಿಣಾಮ ಇದನ್ನು ನೋಡಲು ಪ್ರತಿದಿನವೂ ಸಾವಿರಾರು ಜನರು ಆಗಮಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಮಾರಮ್ಮನ ಮೆರವಣಿಗೆ ಸಾಗುತ್ತದೆ. ಸಮೀಪದಲ್ಲಿ ಎರಡು ದೇವಾಲಯಗಳಿರುವುದರಿಂದ ಇದು ದೈವದ ಪವಾಡ ಎಂದು ಭಾವಿಸಿದ ಭಕ್ತರು ಮರಕ್ಕೆ ಅರಿಶಿಣ, ಕುಂಕುಮ ಹಚ್ಚಿ ಹೂ ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ. ಗೋಲಕ ಇಟ್ಟು ಕಾಣಿಕೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಗುಂಪುಗುಂಪಾಗಿ ಧಾವಿಸಿ ಫೂಜೆ ಸಲ್ಲಿಸುತ್ತಿದ್ದಾರೆ.