ವಿಜಯವಾಣಿ ಸುದ್ದಿಜಾಲ ಕಾರವಾರ
ಬೇಳೆ ಹಾಗೂ ಎಣ್ಣೆ ಪೂರೈಕೆ ವಿಳಂಬವಾಗಿದ್ದು, ಜಿಲ್ಲೆಯ ಕೆಲ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಅಡಚಣೆಯಾಗಿದೆ. ಮಕ್ಕಳಿಗೆ ಮನೆಗಳಿಂದ ಊಟ ತರಲು ತಿಳಿಸಿದ ಪ್ರಸಂಗಗಳೂ ಬೆಳಕಿಗೆ ಬಂದಿವೆ. ಆಕ್ಷರ ದಾಸೋಹ ಅಡುಗೆಗೆ ಅಕ್ಕಿ ಪೂರೈಕೆ ಸಮರ್ಪಕವಾಗಿದೆ. ಸಾಂಬಾರು ಮಾಡಲು ಬೇಕಾದ ಎಣ್ಣೆ, ಬೇಳೆಗಳನ್ನು ರಾಜ್ಯ ಆಹಾರ ನಿಗಮದಿಂದ ಒದಗಿಸಲಾಗುತ್ತಿತ್ತು. ಆದರೆ, ತಿಂಗಳಿಂದ ಅವು ಪೂರೈಕೆಯಾಗಿಲ್ಲ. ಸ್ಥಳೀಯವಾಗಿ ಖರೀದಿಸಿದರೆ ಅದರ ಹಣವನ್ನು ಪಾವತಿಸಲಾಗುವುದೆಯೇ ಎಂಬ ಬಗ್ಗೆ ಇದುವರೆಗೂ ಶಾಲಾ ಮುಖ್ಯ ಶಿಕ್ಷಕರಿಗೆ ಸ್ಪಷ್ಟ ಸೂಚನೆ ಇಲ್ಲ. ಕಾರವಾರದ ಕೆಲ ಶಾಲೆಗಳಲ್ಲಿ ಬೇಳೆ ಖರ್ಚಾಗಿದ್ದು, ಶಾಲಾ ಮುಖ್ಯ ಶಿಕ್ಷಕರು ಸ್ವತಃ ಹಣ ಖರ್ಚು ಮಾಡಿ ಬೇಳೆ ಖರೀದಿಸಿದ್ದಾರೆ. ಇನ್ನು ಕೆಲ ಶಿಕ್ಷಕರು ಮಕ್ಕಳಿಗೆ ಮನೆಯಿಂದ ಆಹಾರ ತನ್ನಿ ಎನ್ನುತ್ತಿದ್ದಾರೆ.
ಸಿಲಿಂಡರ್ ಹಣವೂ ಪೂರ್ಣವಿಲ್ಲ:
ಅಕ್ಷರ ದಾಸೋಹ ಯೋಜನೆಯಲ್ಲಿ ಸಿಲಿಂಡರ್, ಉಪ್ಪು, ಮಸಾಲೆ ತರಕಾರಿಗಳನ್ನು ಸ್ಥಳೀಯವಾಗಿ ಮುಖ್ಯ ಶಿಕ್ಷಕರು ಖರೀದಿಸಬೇಕು. ಶಿಕ್ಷಕರು ತಮ್ಮ ಕೈಯ್ಯಿಂದ ಹಣ ಹಾಕಿ ಖರೀದಿಸಿದ ನಂತರ ಸರ್ಕಾರದಿಂದ ಮರು ಪಾವತಿಸುವ ವ್ಯವಸ್ಥೆ ಇದೆ. ಈ ವಸ್ತುಗಳ ಪರಿವರ್ತಿತ ನಿಧಿ ಐದು ತಿಂಗಳ ನಂತರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದೆ. ಆದರೆ, ಕೆಲವು ಶಾಲೆಗಳಲ್ಲಿ ಖರ್ಚು ಮಾಡಿದ ಸಿಲಿಂಡರ್‌ಗಳಲ್ಲಿ ಅರ್ಧ ಮೊತ್ತ ಮಾತ್ರ ಪಾವತಿಯಾಗಿದೆ. ಇದರಿಂದ ಎಲ್ಲ ಶಿಕ್ಷಕರು ಈಗ ಸಿಲಿಂಡರ್ ಖರೀದಿಗೂ ಹಿಂದೇಟು ಹಾಕುವಂತಾಗಿದೆ.ಬಿಸಿಯೂಟಕ್ಕೆ ಬೇಳೆ ಪೂರೈಕೆ ಸ್ಥಗಿತವಾಗಿದೆ. ಕೆಲ ಶಾಲೆಗಳಲ್ಲಿ ದಾಸ್ತಾನು ಖಾಲಿಯಾಗಿದ್ದು, ಪಕ್ಕದ ಶಾಲೆಗಳಿಂದ ಪಡೆಯಲು ಸೂಚಿಸಲಾಗಿದೆ. ಎಲ್ಲಾದರೂ ಬಿಸಿಯೂಟಕ್ಕೆ ಸಮಸ್ಯೆಯಾದಲ್ಲಿ ತುರ್ತು ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಪ್ರಿಯಾ ನಾಯಕ ವಿಜಯವಾಣಿಗೆ ತಿಳಿಸಿದ್ದಾರೆ.
ಮೊಟ್ಟೆ, ಬಾಣೆಹಣ್ಣಿನ ಹಣವೇ ಬಂದಿಲ್ಲ:
ಶಾಲೆಗಳಲ್ಲಿ ಎರಡು ದಿನ ಮೊಟ್ಟೆ ಅಥವಾ ಬಾಳೆ ಹಣ್ಣನ್ನು ಮಕ್ಕಳಿಗೆ ನೀಡಲು ಸರ್ಕಾರದಿಂದ ಕಳೆದ ಆಗಸ್ಟ್ನಲ್ಲಿ ಸೂಚಿಸಲಾಗಿದೆ. ಮುಖ್ಯ ಶಿಕ್ಷಕರು ಅದನ್ನು ಸ್ಥಳೀಯವಾಗಿ ಖರೀದಿಸಿ ನೀಡಬೇಕಿದೆ. ನಾಲ್ಕು ತಿಂಗಳು ಕಳೆದರೂ ಅದರ ಹಣ ಇದುವರೆಗೂ ಪಾವತಿಯಾಗಿಲ್ಲ. ನೂರು ಹಾಗೂ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಮುಖ್ಯ ಶಿಕ್ಷಕರಿಗೆ 15 ರಿಂದ 20 ಸಾವಿರದವರೆಗೂ ಮೊಟ್ಟೆ, ಬಾಳೆಹಣ್ಣಿನ ಹಣ ಸರ್ಕಾರದಿಂದ ಬರುವುದು ಬಾಕಿ ಇದೆ.
………..