ಜಿಲ್ಲೆ

ಬೇಲೂರು ಪ್ಯಾಕ್ಸ್ ಅಧ್ಯಕ್ಷರಾಗಿ ಎಚ್.ಎಂ. ದಿನೇಶ್ ಆಯ್ಕೆ

ಬೇಲೂರು: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಚ್.ಎಂ.ದಿನೇಶ್ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ತೀರ್ಥಕುಮಾರ್ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ 5 ವರ್ಷದ ಆಡಳಿತ ಮಂಡಳಿ 15 ಸದಸ್ಯರು ಆಯ್ಕೆಯಾಗಿದ್ದು, ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಎಚ್.ಎಂ.ದಿನೇಶ್ ಹಾಗೂ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ತೀರ್ಥಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ತೀರ್ಥಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಆದರೆ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಇಬ್ಬರಲ್ಲಿ ಯಾರೊಬ್ಬರು ವಾಪಸ್ ತೆಗೆಯದ ಕಾರಣ ಚುನಾವಣೆ ನಡೆಯಿತು. ಜೆಡಿಎಸ್ ಬೆಂಬಲಿತ ಎಚ್.ಎಂ.ದಿನೇಶ್ 10 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿತ ಗ್ರಾನೈಟ್ ರಾಜಶೇಖರ್ 5 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾ ಅಧಿಕಾರಿ ಹಾಗೂ ಸಕಲೇಶಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟ ಅಧಿಕಾರಿಯೂ ಆದ ಮಂಜುನಾಥ್ ಫಲಿತಾಂಶ ಘೋಷಿಸಿದರು.

ನೂತನ ಅಧ್ಯಕ್ಷ ಎಚ್.ಎಂ.ದಿನೇಶ್ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಬ್ಯಾಂಕ್ ಅಭಿವೃದ್ಧಿಯೊಂದಿಗೆ ಮತ್ತು ರೈತರ ಪರವಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.

ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾದ ಎಚ್.ವಿ.ಶಿವಶಂಕರ್, ಕಾತ್ಯಾಯಿನಿ, ಮೊಗಪ್ಪಗೌಡ, ನಿಂಗರಾಜು, ಹಿರಿಯಣ್ಣಗೌಡ, ವಸಂತ್‌ಕುಮಾರ್, ಎಸ್.ಎ.ರಮೇಶ್, ಗಂಗಮ್ಮ, ಜಯಶಂಕರ್, ಧನಂಜಯಮೂರ್ತಿ, ಶ್ರೀನಿವಾಸ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಜೆಡಿಎಸ್ ಮುಖಂಡರಾದ ಬಲ್ಲೇನಹಳ್ಳಿ ರವಿಕುಮಾರ್, ಮಲ್ಲೇಗೌಡ, ತಾಪಂ ಮಾಜಿ ಅಧ್ಯಕ್ಷ ಅಶ್ವತ್ಥ್ ಸೇರಿದಂತೆ ನೂರಾರು ಜೆಡಿಎಸ್, ಬಿಜೆಪಿ ಮುಖಂಡರು, ಕಾರ್ಯಕರ್ತರಿದ್ದರು.