ಬೇಲೂರು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಆವರಣ ಪುರಸಭೆಯಿಂದ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಹಾಗೂ ಕಸ ಸಂಗ್ರಹಣೆಗೆ ಚಾಲನೆ ನೀಡುತ್ತಿರುವ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಎಸ್.ಡಿ.ಮಂಜುನಾಥ್, ಜ್ಯೋತಿ ಲೋಹಿತ್, ಪೃಥ್ವಿ, ವಿಶ್ವನಾಥ್, ಕುಮಾರ್ ಇತರರು ಇದ್ದರು.  
ಜಿಲ್ಲೆ

ಬೇಲೂರು ಪಟ್ಟಣ ಸ್ವಚ್ಛವಾಗಿಡಲು ನಾಗರಿಕರು ಸಹಕರಿಸಿ

ಎಂ.ರವಿ

ಬೇಲೂರು: ಸುಂದರ ಕಲೆಗಳ ತವರೂರು ಬೇಲೂರು ಪಟ್ಟಣವನ್ನು ಸ್ವಚ್ಛ ನಗರವಾಗಿಸಲು ಪಟ್ಟಣದ ಪ್ರತಿಯೊಬ್ಬ ನಾಗರಿಕರೂ ಪುರಸಭೆ ಸಿಬ್ಬಂದಿಗೆ ಸಹಕಾರ ನೀಡಬೇಕೆಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮನವಿ ಮಾಡಿದರು.

ಬೇಲೂರು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಆವರಣದಲ್ಲಿ ಪುರಸಭೆಯಿಂದ ಮಂಗಳವಾರ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಮತ್ತು ಕಸ ಸಂಗ್ರಹಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬೇಲೂರು ಪಟ್ಟಣ ಇತಿಹಾಸ ಪ್ರಸಿದ್ಧವಾಗಿದ್ದು ಪಟ್ಟಣದ ಸ್ವಚ್ಛತೆಗೆ ಹೆಚ್ಚಿದ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ಮುಂದಾಗಿದ್ದು, ನಾಗರಿಕರು ಸಹಕಾರ ನೀಡಬೇಕಿರುವುದು ಅವರ ಕರ್ತವ್ಯವಾಗಿದೆ ಎಂದರು.

ಕಳೆದ ಮಾರ್ಚ್ ತಿಂಗಳಿಂದ ಸ್ವಚ್ಛತಾ ಅಭಿಯಾನ ಪ್ರಾರಂಭಿಸಿ ಆರ್‌ಆರ್‌ಆರ್ ಎಂಬ ಯೋಜನೆಯಡಿ ಹಸಿ ಕಸ, ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸಂಗ್ರಹಿಸಲಾಗುತ್ತಿದೆ. ಆದರೆ ಈಗ ಸರ್ಕಾರದ ನಿರ್ದೇಶನದಂತೆ ಸೆ. 15 ರಿಂದ ಅಕ್ಟೋಬರ್ 2ರವರೆಗೆ 5 ರೀತಿಯ ಕಸವನ್ನು ವಿಂಗಡಿಸಿ ಹಸಿ, ಒಣ, ಅಪಾಯಕಾರಿ ಕಸ, ನೈರ್ಮಲ್ಯ ಕಸ ಸೇರಿದಂತೆ ಎಲೆಕ್ಟ್ರಾನಿಕ್ ಕಸ ಸಂಗ್ರಹಣೆ ಮಾಡಲು ಚಾಲನೆ ನೀಡಲಾಗಿದೆ. ಸ್ವಚ್ಛ ಮುಕ್ತ ಭಾರತ ಮತ್ತು ಉತ್ತಮ ನಗರವನ್ನು ನಿರ್ಮಾಣ ಮಾಡಲು ಪಟ್ಟಣದ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಹಕರಿಸಬೇಕು. ಎರಡು ದಿನದ ಹಿಂದೆಯಷ್ಟೆ ಜಿಲ್ಲಾಧಿಕಾರಿ ದೇವಾಲಯಕ್ಕೆ ಭೇಟಿ ನೀಡಿ ದೇಗುಲದ ಸುತ್ತಮುತ್ತಲಿನ ಸ್ವಚ್ಛತೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಆದರೆ ದೇವಾಲಯದ ಸಿಬ್ಬಂದಿ ಇಲ್ಲೆಲ್ಲೂ ಕಾಣಿಸಲಿಲ್ಲ. ಅವರಿಗೆ ಸ್ವಚ್ಛತೆ ಬಗ್ಗೆ ಕನಿಷ್ಠ ಬದ್ಧತೆ ಇಲ್ಲದಂತಾಗಿದೆ. ದೇವಾಲಯದ ಹಿಂಭಾಗದಲ್ಲಿರುವ ಪಾಕಿರ್ಂಗ್ ಸ್ಥಳಕ್ಕೆ ತೆರಳದಂತೆ ಬೀಗ ಹಾಕಿದ್ದಾರೆ. ಇಲ್ಲಿ ಸ್ವಚ್ಛಗೊಳಿಸಲು ಅಡ್ಡಿಯಾಗಿದೆ. ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸಿಬ್ಬಂದಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಅವರು ನಮ್ಮೊಂದಿಗೆ ಸಹಕಾರ ನೀಡಿದರೆ ಹೆಚ್ಚಿನ ಸ್ವಚ್ಛತೆಗೆ ಆದ್ಯತೆ ನೀಡಬಹುದು ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ಉಪಾಧ್ಯಕ್ಷೆ ಸೌಭಾಗ್ಯಾ ಮಾತನಾಡಿ, ಪುರಸಭೆಯಿಂದ ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆಗೆ ಹಾಗೂ ಅಭಿವೃದ್ಧಿಗೆ ಹೆಚ್ಚು ಒತ್ತು ನಿಡಲಾಗುತ್ತಿದೆ. ಜತೆಗೆ 5 ರೀತಿಯ ಕಸ ವಿಂಗಡಣೆಯೊಂದಿಗೆ ಕಸ ಸಂಗ್ರಹಣೆ ಉತ್ತಮ ಕೆಲಸ. ಇದರೊಂದಿಗೆ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್, ಆರೋಗ್ಯಾಧಿಕಾರಿ ಜ್ಯೋತಿ ಲೋಹಿತ್, ಸಿಬ್ಬಂದಿ ಪೃಥ್ವಿ, ವಿಶ್ವನಾಥ್, ಕುಮಾರ್ ಇತರರಿದ್ದರು.