ಜಿಲ್ಲೆ

ಬೇಲೂರು ತಾಲೂಕಿನಾದ್ಯಂತ ನಿರಂತರ ವರ್ಷಧಾರೆ

ಬೇಲೂರು: ತಾಲೂಕಿನಾದ್ಯಂತ ಶನಿವಾರ ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಹೆಬ್ಬಾಳು ಶಾಲೆ ಮತ್ತು ಪಶು ಆಸ್ಪತ್ರೆಗೆ ನೀರು ನುಗ್ಗಿದರೆ ಅರೇಹಳ್ಳಿ ಹೋಬಳಿಯ ನಾರ್ವೆ-ಸುಂಡೇಕೆರೆ ರಸ್ತೆಯ ಸೇತುವೆ ಮೇಲೆಲ್ಲ ನೀರು ಗಂಟೆ ಗಟ್ಟಲೆ ಹರಿದಿದ್ದರಿಂದ ಮನೆಗೆ ತೆರಳುತ್ತಿದ್ದ ವಾಹನಗಳ ಸವಾರರು ಪರದಾಡಿದರೆ, ಬೇಲೂರು ಪಟ್ಟಣದಲ್ಲಿಯೂ ಜನ ಜೀವನ ಅಸ್ತವ್ಯಸ್ತವಾಗಿತ್ತು.

ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಬಿಟ್ಟು ಬಿಟ್ಟು ಬರುತಿದೆ. ಶನಿವಾರ ಸಂಜೆ 6-30ಕ್ಕೆ ಪ್ರಾರಂಭವಾದ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಭಾನುವಾರ ಬೆಳಗ್ಗೆವರೆಗೂ ಬಿಡುವಿಲ್ಲದೆ ಸುರಿದಿದ್ದರಿಂದ ಗ್ರಾಮಾಂತರ ಪ್ರದೇಶ ಸೇರಿದಂತೆ ಪಟ್ಟಣದಲ್ಲೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಹಾಸನಾಂಬೆ ದರ್ಶನ ಪಡೆದ ಸಾವಿರಾರು ಭಕ್ತರು ಬೇಲೂರು ದೇಗುಲಕ್ಕೆ ಆಗಮಿಸಿದ್ದರು. ಮಳೆಯ ನಡುವೆಯೇ ಕೆಲವರು ಚನ್ನಕೇಶವನ ದರ್ಶನ ಪಡೆದರೆ ಮತ್ತೆ ಕೆಲವರಿಗೆ ಮಳೆ ಅಡ್ಡಿಯಾಯಿತು.

ಇನ್ನೂ ಭಾರಿ ಮಳೆಯಿಂದಾಗಿ ಬೇಗ ಕತ್ತಲು ಆವರಿಸಿದ್ದಲ್ಲದೆ ವಾಹನಗಳು ಸಹ ಮುಖ್ಯರಸ್ತೆಯಲ್ಲಿ ಹೆಚ್ಚಾದ್ದರಿಂದ ಟ್ರಾಫಿಕ್‌ಗೆ ಕಾರಣವಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ನೆಹರು ನಗರದ ವೃತ್ತದವರೆಗೂ ಸಂಚರಿಸಲು ಚಾಲಕರು ಪರದಾಡುತ್ತಿದ್ದರು. ಇಷ್ಟೆ ಅಲ್ಲದೆ ತಾಲೂಕಿನ ಹೆಬ್ಬಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪಶು ಚಿಕಿತ್ಸಾಲಯದ ಕಟ್ಟಡಗಳು ಸಂಪೂರ್ಣ ಜಲಾವೃತವಾಗಿದ್ದವು. ಹೆಬ್ಬಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪಶುಆಸ್ಪತ್ರೆಯನ್ನು 1984 ರಲ್ಲಿ ಕೆರೆ ಅಂಗಳದಲ್ಲಿ ಕಟ್ಟಿರುವುದರಿಂದ ಕೆರೆಗೆ ಹರಿದು ಬರುವ ನೀರೆಲ್ಲ ಪ್ರೌಢಶಾಲೆ ಕಟ್ಟಡ ಮತ್ತು ಪಶು ಆಸ್ಪತ್ರೆ ಕಟ್ಟಡದೊಳಗೆ ನುಗ್ಗುತ್ತಿದೆ.

ಪ್ರತಿ ಬಾರಿ ಜೋರಾದ ಮಳೆ ಬಂದು ಕೆರೆ ತುಂಬಿ ಪ್ರೌಢಶಾಲೆ ಮತ್ತು ಪಶು ಆಸ್ಪತ್ರೆಗೆ ನೀರು ನುಗ್ಗಿದಾಗಲೆಲ್ಲ ಇಲ್ಲಿಂದ ಶಾಲೆ ಹಾಗೂ ಆಸ್ಪತ್ರೆ ಸ್ಥಳಾಂತರಿಸಬೇಕೆಂಬ ಕೂಗು ಕೇಳಿ ಬರುತ್ತದೆ. ಆದರೆ ಜನಪ್ರತಿನಿಧಿಗಳ ಸಹಕಾರವಿಲ್ಲದೆ ಅದು ನೆನಗುದಿಗೆ ಬಿದ್ದಿದೆ. ಈ ಶಾಲೆಯಲ್ಲಿ 85 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತಿದ್ದಾರೆ. ಆದರೆ ಮಳೆ ನೀರಿಗೆ ನೆನೆದು ಕಟ್ಟಡ ಶಿಥಿಲವಾಗಿ ಏನಾದರೂ ಅನಾಹುತವಾದರೆ ಎಂಬ ಆತಂಕದಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲು ಮೀನಮೇಷ ಎಣಿಸುವಂತ್ತಾಗಿದೆ. ಶಾಲೆ ಮತ್ತು ಪಶು ಆಸ್ಪತ್ರೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತಿದ್ದು, ಅಧಿಕಾರಿಗಳ ವಿರುದ್ಧ ಪಾಲಕರು ಆಕ್ರೋಶವನ್ನು ವ್ಯಕ್ತಪಡಿಸುತಿದ್ದಾರೆ.