ಜಿಲ್ಲೆ

ಬೇಲೂರಿನಲ್ಲಿ ಹಡಪದ ಅಪ್ಪಣ್ಣ ಜಯಂತಿ

ಬೇಲೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು.
ಬೇಲೂರು ಸವಿತಾ ಸಮಾಜದ ಅಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿ, ಹಡಪದ ಅಪ್ಪಣ್ಣ ಜಯಂತಿಯನ್ನು ಸರ್ಕಾರ ರಾಜ್ಯಾದ್ಯಂತ ಆಚರಿಸುತ್ತಿರುವುದು ಶ್ಲಾಘನೀಯ. ಆದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕ್ಷೌರಿಕ ವೃತ್ತಿ ಮಾಡುವವರನ್ನು ನಿಂದಿಸುವುದು ಸಾಕಷ್ಟು ನೋವಿಗೆ ಕಾರಣವಾಗುತ್ತಿದೆ. ನಮಗೆ ಸಮಾಜದಲ್ಲಿ ಗೌರವದ ಸ್ಥಾನಮಾನ ಸಿಗದಿರುವುದರಿಂದ ಅಪಹಾಸ್ಯಕ್ಕೀಡಾಗುತ್ತಿದ್ದೇವೆ. ನಮ್ಮ ವೃತ್ತಿಗೆ ಗೌರವ ಸಿಗಬೇಕೆಂದರೆ ಹಿರಿಯರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಈ ಬಗ್ಗೆ ಅಧ್ಯಕ್ಷರು ಗಮನ ಹರಿಸಬೇಕು ಎಂದರು.
ಸವಿತಾ ಸಮಾಜದ ನಗರಾಧ್ಯಕ್ಷ ಆನಂದ್ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಸಮಾಜದವರು ಸೇರಿ ಅದ್ದೂರಿಯಾಗಿ ಹಡಪದ ಅಪ್ಪಣ್ಣ ಜಯಂತಿ ಆಚರಿಸೋಣ ಎಂದರು.
ಬಿಆರ್‌ಸಿ ಶಿವಮರಿಯಪ್ಪ ಮಾತನಾಡಿ, ಹಡಪದ ಅಪ್ಪಣ್ಣ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಬಸವಣ್ಣನಂತೆ ಆದರ್ಶ ವ್ಯಕ್ತಿತ್ವ ಹೊಂದಿದ್ದರು. ಎಲ್ಲರೂ ಸಮಾನರು ಎಂಬುದನ್ನು ಜಗತ್ತಿಗೆ ತೋರಿಸಿದವರು ಎಂದರು.
ತಹಸೀಲ್ದಾರ್ ಎ.ಮಮತಾ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಗ್ರೇಡ್-2 ಅಶೋಕ್‌ಕುಮಾರ್, ಶಿರಸ್ತೇದಾರ್ ರಂಗನಾಥ್, ಸವಿತಾ ಸಮಾಜದ ಸಹ ಕಾರ್ಯದರ್ಶಿ ಅನಿಲ್ ಇತರರಿದ್ದರು.