ಬೇಲೂರು: ಪಟ್ಟಣ ಸಮೀಪದ ಎಸ್.ಸೂರಾಪುರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ವಿವಿಧ ಮಸೀದಿಯ ಮುಸ್ಲಿಮರು ಕೋಟೆ ಜಾಮೀಯಾ ಮಸೀದಿ ಗುರು ಮೌಲಾನಾ ರಿಜ್ವಾನ್ ರಜಾ ನೇತೃತ್ವದಲ್ಲಿ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಧರ್ಮಗುರು ಮೌಲಾನಾ ರಿಜ್ವಾನ್ ರಜಾ ಮಾತನಾಡಿ, ಬಕ್ರಿದ್ ಹಬ್ಬ ತ್ಯಾಗ, ಶ್ರದ್ಧೆ ಮತ್ತು ಧರ್ಮನಿಷ್ಠೆಯ ಪ್ರತೀಕ. ಬಕ್ರೀದ್ ಅಂದರೆ ಕೇವಲ ಹಬ್ಬವಲ್ಲ, ಅದು ಮಾನವೀಯತೆ, ನಿಷ್ಠೆಯ ಮತ್ತು ಭಕ್ತಿಯ ಪವಿತ್ರ ಸ್ಮರಣೆ. ಇದು ಇಬ್ರಾಹಿಂ ಅವರ ತ್ಯಾಗದ ಕತೆ. ತಮ್ಮ ಪ್ರೀತಿಯ ಮಗನನ್ನೇ ಸೃಷ್ಟಿಕರ್ತನ ಆದೇಶಕ್ಕೆ ಬಲಿಯಾಗಿ ನೀಡಿರುವುದು ನಮಗೆ ಮಹತ್ವದ ಸಂದೇಶ ನೀಡುತ್ತದೆ. ವಿಶ್ವಾಸ, ನಿಷ್ಠೆ ಮತ್ತು ಧರ್ಮದ ಮಾರ್ಗದಲ್ಲಿ ತ್ಯಾಗ ಮಾಡಲು ನಾವು ಸಿದ್ಧರಾಗಬೇಕು. ಈ ಪವಿತ್ರ ದಿನ ನಮ್ಮನ್ನು ಮಾನವೀಯ ಮೌಲ್ಯಗಳತ್ತ ಮತ್ತಷ್ಟು ಹತ್ತಿರಕ್ಕೆ ತೆಗೆದುಕೊಂಡು ಹೋಗಲಿ. ಮನಸ್ಸಿನಲ್ಲಿ ಶ್ರದ್ಧೆ, ಮನೆಯಲ್ಲಿ ನೆಮ್ಮದಿ ಹಾಗೂ ಹೃದಯಗಳಲ್ಲಿ ಪರಸ್ಪರ ಪ್ರೀತಿ ಮತ್ತು ಸಹಾನುಭೂತಿ ಬೆಳೆಸಲಿ.
ಬಕ್ರೀದ್ ನೈತಿಕತೆಯ, ಸಮರ್ಪಣೆಯ ಹಬ್ಬವು ಎಲ್ಲರನ್ನು ಒಂದೇ ದಾರಿ, ನಂಬಿಕೆ, ಮೌಲ್ಯಗಳ ಹಾದಿಯಲ್ಲಿ ನಡೆಯುವಂತೆ ಮಾಡುವ ಸಂದೇಶವಾಗಿದೆ. ನಮ್ಮ ಪೂರ್ವಜರು ನಡೆದ ಧರ್ಮದ, ತ್ಯಾಗದ ದಾರಿಯಲ್ಲಿ ನಾವೂ ಸಾಗೋಣ. ಇಡೀ ಮನುಕುಲಕ್ಕೆ ಶಾಂತಿ, ಸಹಾನುಭೂತಿ ಮತ್ತು ಪ್ರೀತಿಯ ಹಾರೈಕೆಗಳು ಮತ್ತು ಈ ಹಬ್ಬದಂದು ಕೇವಲ ಪ್ರಾಣಿ ಬಲಿ ನೀಡುವುದರಿಂದ ಹಬ್ಬವಾಗುವುದಿಲ್ಲ. ಮೊದಲು ತಮ್ಮಲ್ಲಿರುವ ಅಸಹನೆ ದ್ವೇಷ, ಬಡವರ ಹಕ್ಕು ಕಿತ್ತುಕೊಳ್ಳುವುದು. ಈ ದುಷ್ಟ ಭಾವನೆಗಳನ್ನು ಬಲಿ ಕೊಡಬೇಕು ಎಂದು ಸಲಹೆ ನೀಡಿದರು.
ಈದ್ಗ ಮೈದಾನದಲ್ಲಿ ಪ್ರಾರ್ಥನೆ ಮುಗಿದ ನಂತರ ಪುಟ್ಟ ಮಕ್ಕಳು, ಹಿರಿಯರು ಪರಸ್ಪರ ಆಲಂಗಿಸಿ ಸಿಹಿ ಹಂಚಿದರು. ಹಬ್ಬದ ಅಂಗವಾಗಿ ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ, ಪಿಎಸ್‌ಐ ಶಿವನಗೌಡ ಜಿ.ಪಾಟೀಲ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.