ಬೇಲೂರು: ಇಲ್ಲಿನ ಶ್ರೀ ಚೆನ್ನಕೇಶವಸ್ವಾಮಿದೇಗುಲ ವೀಕ್ಷಣೆ ಮತ್ತು ಪೂಜೆಗೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರ ಅನುಕೂಲಕ್ಕೆ ರಾತ್ರಿ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನದ ದಾಸೋಹ ಭವನದಲ್ಲಿ ಭಕ್ತರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ರಾತ್ರಿ ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೇಲೂರು ದೇವಸ್ಥಾನಕ್ಕೆ ಸಾವಿರಾರು ಪ್ರವಾಸಿಗರು, ಭಕ್ತರು ಬರುತ್ತಾರೆ. ಇಲ್ಲಿಗೆ ಬಂದವರಿಗೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯ. ದಾಸೋಹದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾತ್ರ ಮಾಡಲಾಗಿತ್ತು. ಇದೀಗ ಆಡಳಿತ ಮಂಡಳಿ ರಾತ್ರಿಯೂ ದಾಸೋಹದ ವ್ಯವಸ್ಥೆ ಮಾಡಲು ತೀರ್ಮಾನಿಸಿದೆ ಎಂದು ಹೇಳಿದರು.
ಬೇಲೂರಿಗೆ ರಾತ್ರಿ ಬರುವ ಪ್ರವಾಸಿಗರು, ಇಲ್ಲೇ ತಂಗಬಹುದು. ಇದರಿಂದ ದೇವಸ್ಥಾನದ ಸುತ್ತಮುತ್ತಲಿನ ಪ್ರವಾಸಿ ಗೃಹ, ಅಂಗಡಿಗಳ ವ್ಯಾಪಾರ ವೃದ್ಧಿಯಾಗುತ್ತದೆ. ದೇವಸ್ಥಾನಕ್ಕೂ ಆದಾಯ ಬರುತ್ತದೆ. ದಾಸೋಹಕ್ಕೆ ಬರುವವರಿಗೆ ಶುಚಿ, ರುಚಿಯಾಗಿ ಊಟ ಬಡಿಸಬೇಕು ಎಂದರು.
ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಸದಸ್ಯೆ ವಿಜಯಲಕ್ಷ್ಮೀ, ಮುಖಂಡರಾದ ಜಿ.ಕೆ.ಕುಮಾರ್, ಜಯಣ್ಣಗೌಡ, ರಮೇಶ್, ದಯಾನಂದ್ ಇತರರಿದ್ದರು.