ಬೇಲೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಸನ ಜಿಲ್ಲಾ ಪ್ರವಾಸ ಸಂದರ್ಭ ಫೆಬ್ರವರಿ 21ರಂದು ಬೇಲೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣಕ್ಕಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೈಸೂರು ವಿಭಾಗಿಯ ಚುನಾವಣಾ ಪ್ರಭಾರಿ ನಿರ್ಮಲ್‌ಕುಮಾರ್ ಸುರಾನ ಮಾತನಾಡಿ, ಜೆ.ಪಿ.ನಡ್ಡಾ ಅವರು, ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಶೃಂಗೇರಿ, ಚಿಕ್ಕಮಗಳೂರು ಮೂಲಕ ಫೆಬ್ರವರಿ 21ರಂದು ಬೇಲೂರಿಗೆ ಆಗಮಿಸಲಿದ್ದಾರೆ. ಚನ್ನಕೇಶವಸ್ವಾಮಿ ದೇವರ ದರ್ಶನ ಪಡೆದ ನಂತರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು. ಈ ಬಾರಿ ಜಿಲ್ಲೆಯ 7 ಸ್ಥಾನಗಳ ಪೈಕಿ 5 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುತ್ತಿದೆ ಎಂದರು.
ನಮ್ಮದು ಶಿಸ್ತಿನ ಪಕ್ಷ. ಅಭ್ಯರ್ಥಿಗಳನ್ನು ತರಾತುರಿಯಲ್ಲಿ ಘೋಷಿಸುವುದಿಲ್ಲ. ಕೋರ್ ಕಮಿಟಿ ಸದಸ್ಯರು ಮತ್ತು ಮುಖಂಡರು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಮಾತನಾಡಿ, ಬೇಲೂರು ಮತ್ತು ಹಾಸನದಲ್ಲಿ ಜೆ.ಪಿ.ನಡ್ಡಾ ಅವರು ಸಮಾವೇಶ ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಬೇಲೂರಿನಲ್ಲಿ ಮಧ್ಯಾಹ್ನ 12 ಗಂಟೆಗೆ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷರು ಭಾಗವಹಿಸಲಿದ್ದಾರೆ. 20 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಮೈಸೂರು ವಿಭಾಗದ ಉಸ್ತುವಾರಿ ಮೈ.ವಿ.ರವಿಶಂಕರ್, ಜಿಲ್ಲಾ ಬಿಪಿಪಿ ಮಾಜಿ ಅಧ್ಯಕ್ಷ ರೇಣುಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ತಾಲೂಕು ಅಧ್ಯಕ್ಷ ಆನಂದ್, ಬೇಲೂರು- ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ಸದಸ್ಯ ಪ್ರಭಾಕರ್, ಮುಖಂಡರಾದ ಜಿ.ಕೆ.ಕುಮಾರ್, ಪರ್ವತಯ್ಯ, ಶಶಿಕುಮಾರ್, ಸಂತೋಷ್, ಸುಮನ್, ವಿನಯ್, ಚೇತನ್, ರಮೇಶ್, ಗಂಗೂರು ಶಿವಕುಮಾರ್ ಇತರರಿದ್ದರು.