ಬೇಲೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಮಂಡ್ಯದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ರೈತರ ಮೇಲೆ ದರ್ಪ ತೋರಿ, ರಾಷ್ಟ್ರನಾಯಕ ಭಾವಚಿತ್ರಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಗುರುವಾರ ತಾಲೂಕು ರೈತ ಸಂಘದ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ತಡೆ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ಮಂಡ್ಯದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು 57 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ವಿರುದ್ಧ ಪೊಲೀಸರನ್ನು ಬಿಟ್ಟು ದೌಜನ್ಯ ನಡೆಸಿದೆ. ಇದನ್ನು ತಾಲೂಕು ರೈತ ಸಂಘ ಖಂಡಿಸುತ್ತದೆ ಎಂದು ಕಿಡಿಕಾರಿದರು.
ಅಲ್ಲದೆ ಪ್ರತಿಭಟನೆ ಸಂದರ್ಭ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಕಿತ್ತೆಸೆದು ಅವರಿಗೂ ಅವಮಾನಿಸಿದೆ. ಈ ಹಿಂದೆ ಗುಂಡೂರಾವ್ ಸರ್ಕಾರ ಸಹ ಹೀಗೆ ರೈತರ ವಿರುದ್ಧ ನಡೆದುಕೊಂಡಿದ್ದರಿಂದ ಮುಂದೆ ಅವರ ಗತಿ ಏನಾಯಿತು ಎಂಬುದನ್ನು ರಾಜ್ಯ ಸರ್ಕಾರ ಅರಿತು ಮುಂದುವರಿಯಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ಕಬ್ಬು ಬೆಳೆಗಾರರಿಗೆ ಸರಿಯಾದ ಬೆಲೆ ನೀಡಲಾಗುತ್ತಿದೆ. ಆದರೆ ನಮ್ಮಲ್ಲಿ ಮಾತ್ರ ರೈತರಿಗೆ ತಾರತಮ್ಯ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದರು. ಅವರ ಮೇಲೆ ಸರ್ಕಾರ ದರ್ಪ ತೋರಿದೆ ಎಂದು ಕಿಡಿಕಾರಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಬಸವರಾಜು, ಮುಖಂಡರಾದ ಪುಟ್ಟೇಗೌಡ, ಮಲ್ಲೇಶ್, ಸಚಿನ್, ಧನಂಜಯ್, ಪುಟ್ಟಸ್ವಾಮಿ ಸೇರಿದಂತೆ ಇತರರಿದ್ದರು.