ಬೇಲೂರು: ಬಿಜೆಪಿ ಸರ್ಕಾರ ಬೇಲೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು, ಚುನಾವಣೆಯಲ್ಲಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಜನತೆಗೆ ನೀರು ಕೊಡುವುದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಏತ ನೀರಾವರಿಗೆ ಹಣ ಕೊಟ್ಟು ಚಾಲನೆ ನೀಡಿದರು. ರಣಘಟ್ಟ ಯೋಜನೆಗೆ ಹಣ ನೀಡುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಕಳೆದ 4 ವರ್ಷದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ 1,800 ಕೋಟಿ ರೂ. ನೀಡಿದೆ. ಆದರೆ ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್ ಅವರು 1800 ಕೋಟಿ ರೂ. ತಂದಿರುವುದು ನನ್ನ ಶ್ರಮದಿಂದ ಎನ್ನುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡು ಬಾರಿ ಕಾಂಗ್ರೆಸ್‌ಗೆ ಮತ್ತು ಒಂದು ಬಾರಿ ಜೆಡಿಎಸ್‌ಗೆ ಅವಕಾಶ ಮಾಡಿಕೊಟ್ಟಿರುವ ಮತದಾರರು ಈ ಬಾರಿ ಬಿಜೆಪಿಗೆ ಅವಕಾಶ ಮಾಡಿಕೊಡಲಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಇಲ್ಲದಿರುವ ಸಮಸ್ಯೆ ಇಲ್ಲಿದೆ. ಆದ್ದರಿಂದ ಇಲ್ಲಿ ಕಾಡುತ್ತಿರುವ ಜಡತ್ವದ ಸಮಸ್ಯೆಗಳನ್ನು ನಿವಾರಿಸಲು ನನಗೆ ಸಹಕಾರ ನೀಡಿದರೆ, 32 ದಿನಗಳ ನಂತರ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ರೇಣುಕುಮಾರ್ ಮಾತನಾಡಿ, ಎಲ್ಲ ಪಕ್ಷದಲ್ಲೂ ಟಿಕೆಟ್ ವಿಚಾರವಾಗಿ ಗೊಂದಲ ಸಾಮಾನ್ಯ. ಆದರೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಬಳಿಕವೇ ಸುರೇಶ್‌ಗೆ ಟಿಕೆಟ್ ನೀಡಲಾಗಿದೆ. 3 ವರ್ಷದಿಂದ ಬಿಜೆಪಿ ಚುನಾವಣಾ ತಯಾರಿ ನಡೆಸಿದೆ. ಆದ್ದರಿಂದ ಬಿಜೆಪಿಗೆ ಈ ಬಾರಿ ಅನುಕೂಲವಾಗಲಿದೆ. ಜೆಡಿಎಸ್ ಸರ್ಕಾರವಿದ್ದಾಗ ರಣಘಟ್ಟ ಯೋಜನೆಗೆ ಏಕೆ ಹಣ ತರಲಿಲ್ಲ. ಸ್ವಾಮೀಜಿಗಳು ಯೋಜನೆಗಾಗಿ ಹೋರಾಟ ಮಾಡುತಿದ್ದ ಸಂದರ್ಭ ಶಾಸಕರು ರಾಜಕಾರಣ ಮಾಡಿದರು. ಇದಲ್ಲದೆ ಬಿಜೆಪಿಗೆ ಎಲ್ಲಿ ಹೆಚ್ಚು ಮತಗಳು ಬಂದಿದ್ದವೊ ಅಲ್ಲಿ ಕೆಲಸ ಮಾಡಿಸಲಿಲ್ಲ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್, ಜಿಲ್ಲಾ ಉಪಾಧ್ಯಕ್ಷೆ ಬಿ.ಕೆ.ಚಂದ್ರಕಲಾ, ಪುರಸಭಾ ನಾಮನಿರ್ದೇಶಿತ ಸದಸ್ಯ ಪೈಂಟ್ ರವಿ, ತಾಲೂಕು ಚುನಾವಣೆ ಉಸ್ತುವಾರಿ ದಿನೇಶ್ ಸುದ್ದಿಗೋಷ್ಟಿಯಲ್ಲಿದ್ದರು.
ಎಲ್ಲ ಪಕ್ಷಗಳಲ್ಲೂ ಎಲ್ಲ ಆಕಾಂಕ್ಷಿಗಳಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ನಾನು ಎಲ್ಲರ ಸಹಕಾರ ಪಡೆಯುತ್ತೇನೆ. ಬೇಲೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುಂಠಿತವಾಗಿದೆ. ಡಬಲ್ ಇಂಜಿನ್ ಸರ್ಕಾರದ ಮಹತ್ವಪೂರ್ಣ ಯೋಜನೆಗಳಿಂದ ಜನರು ಈ ಬಾರಿ ಬಿಜೆಪಿಗೆ ಬೆಂಬಲ ನೀಡುವುದರಿಂದ ಬೇಲೂರಿನಲ್ಲಿ ಕಮಲ ಆರಳುವುದು ಖಚಿತ.
ಎಚ್.ಕೆ.ಸುರೇಶ್ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ