ಸರಗೂರು ತಾಲೂಕಿನ ಹೆಡಿಯಾಲ ಅರಣ್ಯ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಎಚ್.ಬಿ.ವಿಜಯಕುಮಾರ್ ಮಾತನಾಡಿದರು. ಸತೀಶ್, ರುಕೀಯಾ ಬೇಗಂ, ಧರಣೀಶ್, ರವಿಕುಮಾರ್ ಇದ್ದರು.  
ಜಿಲ್ಲೆ

ಬೇಲದಕುಪ್ಪೆ ಮಹದೇಶ್ವರ ಜಾತ್ರೆಗೆ ಸಿದ್ಧತೆ ಕೈಗೊಳ್ಳಿ

ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಸಿ ಎಚ್.ಬಿ.ವಿಜಯ್‌ಕುಮಾರ್ ಸೂಚನೆ

ಸರಗೂರು : ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ವೇಳೆ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜತೆಗೆ ಮೂಲಸೌಲಭ್ಯ ಕಲ್ಪಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹುಣಸೂರು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಸೂಚನೆ ನೀಡಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಶ್ರೀಕ್ಷೇತ್ರ ಬೇಲದಕುಪ್ಪೆ ಮಹದೇಶ್ವರ ಜಾತ್ರೆ ಅಂಗವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನ ಪರಿಶೀಲನೆ ನಡೆಸಿ ನಂತರ ಹೆಡಿಯಾಲ ಉಪವಲಯ ಕಚೇರಿಯ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ದೇವಸ್ಥಾನಕ್ಕೆ ಬರುವ ಭಕ್ತರಿಗಳಿಗೆ ಹಾಗೂ ಸಾರ್ವಜನಿಕರು ತೊಂದರೆ ಆಗದಂತೆ ಕಂದಾಯ ಮತ್ತು ಆರೋಗ್ಯ ಮತ್ತು ನೈರ್ಮಲ್ಯ, ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಅದೇ ರೀತಿ ಈ ಸಲ ಅದ್ದೂರಿಯಾಗಿ ನಡೆಯಬೇಕು. ಧಾರ್ಮಿಕ ಪೂಜೆಗಳಿಗೆ ತೊಂದರೆ ನೀಡಬಾರದು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಸಂದರ್ಭದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ದೇವಸ್ಥಾನಕ್ಕೆ ಬರಲು ವಿವಿಧೆಡೆಯಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕು. ಗೇಟ್ ಮುಂಭಾಗ ಅಂಗಡಿ, ಮುಂಗಟ್ಟುಗಳಿಗೆ ಹಾಗೂ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ರಸ್ತೆಗಳ ಬದಿಯಲ್ಲಿ ಬೆಳೆದಿರುವ ಗಿಡಗಂಟಿ ತೆರವು ಮಾಡಬೇಕು. ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು. ಕುಡಿಯುವ ನೀರು ಸರಬರಾಜು ಮಾಡಲು ತಾತ್ಕಾಲಿಕವಾಗಿ ಟ್ಯಾಂಕ್ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪೊಲೀಸ್ ಇಲಾಖೆ ಹೆಚ್ಚು ಸಿಬ್ಬಂದಿ ನಿಯೋಜಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ತಹಸೀಲ್ದಾರ್ ರುಕಿಯಾ ಬೇಗಂ ಜಾತ್ರಾ ಮಹೋತ್ಸವ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಈ ಭಾಗದ ಟ್ರಸ್ಟ್, ಸಮಿತಿ ಹಾಗೂ ಎಲ್ಲ ಗ್ರಾಮಗಳ ಮುಖಂಡರು ಹಾಗೂ ಯಜಮಾನರನ್ನು ವಿಶ್ವಾಸ ತೆಗೆದುಕೊಂಡು ಸಭೆ ಮಾಡಬೇಕೆಂದು ಮುಜರಾಯಿ ಧಾರ್ಮಿಕ ದತ್ತಿ ಇಲಾಖೆ ಇಒ ರಘು ಅವರಿಗೆ ಸೂಚನೆ ನೀಡಿದರು.

ಮುಖಂಡರು ಒತ್ತಾಯ: ದೇವಸ್ಥಾನದಲ್ಲಿ ದೇವರಿಗೆ ಪೂಜೆ ಮಾಡಲು ಅನುಮತಿ ಇಲ್ಲದೇ ದೇವರು ಅನಾಥವಾಗಿದೆ. ಜಾತ್ರಾ ಮಾಡುವ ಸಂದರ್ಭದಲ್ಲಿ ಟ್ರಸ್ಟ್ ಸಮಿತಿಯಿಂದ ದೇವಸ್ಥಾನಕ್ಕೆ ಸುಣ್ಣಬಣ್ಣ ಬಳಿದು ಹಾಗೂ ಗಿಡಗಂಟಿ ಕಡಿದು ಸ್ವಚ್ಛತೆ ಮಾಡಿಕೊಂಡು ಬರುವ ಭಕ್ತರಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದ್ದೆವು. ಹಿಂದೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಮಂಗಳವಾದ್ಯ, ವಿದ್ಯುತ್ ದೀಪಾಲಂಕಾರ, ನಾಲ್ಕೈದು ಗ್ರಾಮಗಳ ತೇರು ಬರುತ್ತಿದ್ದವು. ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರ್ಪಡೆಯಾದ ಮೇಲೆ ಇವುಗಳಿಗೆ ಅವಕಾಶ ನೀಡುತ್ತಿಲ್ಲ. ಈ ಸಲ ಅವುಗಳನ್ನು ಒಳಗಡೆ ಬಿಡಲು ಅವಕಾಶ ನೀಡಬೇಕೆಂದು ಒತ್ತಾ ಯಿಸಿದರು.

ಕಳೆದ ಒಂದು ತಿಂಗಳ ಹಿಂದೆ ದೇವಸ್ಥಾನದಲ್ಲಿ ನಿರಂತರವಾಗಿ ಪೂಜೆ ಮಾಡಿಕೊಂಡು ಬರುತ್ತಿರುವ ಪೂಜಾರಿಗೆ ನಮ್ಮ ಟ್ರಸ್ಟ್ ವತಿಯಿಂದ ಒಂದು ಕೊಠಡಿ ಮಾಡಿ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದೆವು. ಆದರೆ ಮುಜರಾಯಿ ಇಲಾಖೆಗೆ ಸೇರಿದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಪೂಜೆ ಮಾಡಲು ಬರುವ ಪೂಜಾರಿಯನ್ನು ವಾಪಸ್ ಕಳುಹಿಸುತ್ತಿದ್ದಾರೆ. ಆದ್ದರಿಂದ ಪೂಜಾರಿ ಅಲ್ಲಿಯೇ ಉಳಿದುಕೊಳ್ಳಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಸರಗೂರು ತಾಲೂಕು ತಹಸೀಲ್ದಾರ್ ರುಕಿಯಾ ಬೇಗಂ, ತಾಪಂ ಇಒ ಧರಣೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ. ರವಿಕುಮಾರ್, ಎಸಿಎಫ್ ಸತೀಶ್, ಧಾರ್ಮಿಕ ದತ್ತಿ ಇಲಾಖೆ ಇಒಗಳಾದ ರಘು, ರಾಕೇಶ್, ಆರ್‌ಎಫ್‌ಒ ವಿವೇಕ್, ಅಮೃತಾ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಗೋವಿಂದ ನಾಯಕ, ಕೆಇಬಿ ಎಇಇ ದೀಪಿಕಾ, ಪಿಡಿಒಗಳಾದ ಚಿನ್ನಸ್ವಾಮಿ, ಪರಮೇಶ್, ಕಂದಾಯ ಇಲಾಖೆ ಸಿಬ್ಬಂದಿ ರವಿಂದ್ರ, ಮುಜೀಬ್, ಶ್ರೀನಿವಾಸ, ಗ್ರಾಪಂ ಸದಸ್ಯರಾದ ಗಂಗಾಧರ್, ಶಿವಕುಮಾರ್, ಮುಖಂಡ ನಾಗೇಂದ್ರ ಸೇರಿದಂತೆ ಇನ್ನಿತರರು ಇದ್ದರು.