ಜಿಲ್ಲೆ

ಬೇಯಿಸಿದ ಮೊಟ್ಟೆ ಹಂಚಿ ಕಾಂಗ್ರೆಸ್ ಪ್ರತಿಭಟನೆ: ಸಿದ್ದು ಕಾರಿನ ಮೇಲೆ ಮೊಟ್ಟೆ ಎಸೆತಕ್ಕೆ ಆಕ್ರೋಶ

ಹೊಸನಗರ: ಮಡಿಕೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿ ನಗರ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ಬೇಯಿಸಿದ ಮೊಟ್ಟೆಯನ್ನು ಹಂಚುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.

ಸೋಮವಾರ ನಗರ ನಾಡಕಚೇರಿ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಉತ್ತಮ ಆರೋಗ್ಯಕ್ಕೆ ಮೊಟ್ಟೆ ಸಹಕಾರಿ. ತಿನ್ನುವ ವಸ್ತುವಾಗಿದೆ. ಆದರೆ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಅದನ್ನು ಎಸೆಯುವ ಮೂಲಕ ತಮ್ಮ ಸಂಸ್ಕೃತಿಯನ್ನು ಬಿಂಬಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊಟ್ಟೆ ಎಸೆದ ಪ್ರಕರಣ ವಿರೋಧಿಸಿ ನಾಡ ಕಚೇರಿಯ ಕಂದಾಯ ನಿರೀಕ್ಷಕ ಸಾಜಿದ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಲು ಬಂದ ಅಧಿಕಾರಿಗಳಿಗೂ ಮೊಟ್ಟೆ ಹಂಚಲಾಯಿತು.