ಜಿಲ್ಲೆ

ಬೇಡಿಕೆಗೆ ಸ್ಪಂದಿಸದಿದ್ದರೆ 10ರಿಂದ ಹೋರಾಟ

ಹುಬ್ಬಳ್ಳಿ: ನಮ್ಮ ವಿವಿಧ ಬೇಡಿಕೆಗಳಿಗೆ ಸರ್ಕಾರ ಕೂಡಲೆ ಸ್ಪಂದಿಸಬೇಕು. ಇಲ್ಲದಿದ್ದರೆ ಜು. 10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸುವುದಾಗಿ ಆಶಾ ಕಾರ್ಯಕರ್ತೆಯರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಮಗೆ 12 ಸಾವಿರ ರೂ. ಮಾಸಿಕ ಗೌರವ ಧನ ಖಾತರಿಪಡಿಸಬೇಕು. ಅಗತ್ಯ ಆರೋಗ್ಯ ರಕ್ಷಣಾ ಸಾಮಗ್ರಿ ನೀಡಬೇಕು ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸಿದರು. ಕಳೆದ ಜನವರಿಯಿಂದ ಹಲವು ಬಾರಿ ಈ ಕುರಿತು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಪ್ರತಿ ಆಶಾ ಕಾರ್ಯಕರ್ತೆಗೆ ಮಾಸಿಕ ಸರಾಸರಿ 8ರಿಂದ 9 ಸಾವಿರ ರೂ. ಪ್ರೋತ್ಸಾಹ ಧನದ ವಿವಿಧ ಕೆಲಸಗಳ ಹಣವನ್ನು ಮತ್ತು ಗೌರವಧನವನ್ನು ಬಿಡಿಬಿಡಿಯಾಗಿ ನೀಡಲಾಗುತ್ತಿದೆ. ಆದರೆ, ಈ ಎಲ್ಲ ಚಟುವಟಿಕೆಗಳನ್ನು ಪ್ರತ್ಯೇಕವಾಗಿ ಪೋರ್ಟಲ್​ನಲ್ಲಿ ದಾಖಲಿಸಬೇಕಿದ್ದರಿಂದ ಈ ಹಣ ಸರಿಯಾಗಿ ತಲುಪುತ್ತಿಲ್ಲ. ಪ್ರೋತ್ಸಾಹ ಧನ ಮತ್ತು ಗೌರವಧನ ಎರಡನ್ನೂ ಒಟ್ಟಿಗೆ ಸೇರಿಸಿ ಮಾಸಿಕ ಒಂದೇ ನಿಶ್ಚಿತ ಗೌರವಧನ 12 ಸಾವಿರ ರೂ. ನೀಡುವಂತೆ ಆಗ್ರಹಿಸಿದರು.

ಜು. 10ರಿಂದ ರಾಜ್ಯಾದ್ಯಂತ 42 ಸಾವಿರ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆಯ ಎಲ್ಲ ಕೆಲಸಗಳನ್ನು ನಿಲ್ಲಿಸಿ, ಹೋರಾಟ ತೀವ್ರಗೊಳಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಭಾರತಿ ಶೆಟ್ಟರ್, ರಾಜೇಶ್ವರಿ ಉಣಕಲ್, ದೀಪಿಕಾ ಮುರ್ಖಂಡಿ, ಸವಿತಾ ಮಜ್ಜಗಿ, ಬಸಮ್ಮ ಬಿದರಕುಂದಿ ಇತರರಿದ್ದರು.