ಜಿಲ್ಲೆ

ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಂಗ್ರಹ

ಹಾಸನ: ಹಾಸನ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಾಡಿಕೆಯಂತೆ ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ತಂಬಾಕು, ಭತ್ತ, ರಾಗಿ ಮುಸುಕಿನ ಜೋಳದ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಪ್ರಸ್ತುತ 1,920 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಭೂಮಿ ಸಿದ್ಧತೆ ಮತ್ತು ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.

ಜಿಲ್ಲೆಯ ಬೆಳೆ ಪದ್ಧತಿ ಆಧರಿಸಿ ಮುಂಗಾರು ಹಂಗಾಮಿಗೆ 1,38,683 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಪ್ರಮುಖವಾಗಿ ಯೂರಿಯಾ 51,313 ಮೆಟ್ರಿಕ್ ಟನ್, ಡಿಎಪಿ 14,652 ಮೆಟ್ರಿಕ್ ಟನ್, ಎಂಒಪಿ 9,061 ಮೆಟ್ರಿಕ್ ಟನ್, ಎನ್‌ಪಿಕೆ 61,645 ಮೆಟ್ರಿಕ್ ಟನ್, ಎಸ್‌ಎಸ್‌ಪಿ 2,102 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇರುತ್ತದೆ. ಜಿಲ್ಲೆಯ ಚಿಲ್ಲರೆ ಮತ್ತು ಸಗಟು ಮಾರಾಟಗಾರರಲ್ಲಿ 41,009 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಪ್ರಮುಖವಾಗಿ ಯೂರಿಯಾ 14,282 ಮೆಟ್ರಿಕ್ ಟನ್, ಡಿಎಪಿ 37,95 ಮೆಟ್ರಿಕ್ ಟನ್, ಎನ್‌ಪಿಕೆ ಕಾಂಪ್ಲೇಕ್ಸ್ 17,537 ಮೆಟ್ರಿಕ್ ಟನ್, ಎಂಒಪಿ 3,627 ಮೆಟ್ರಿಕ್ ಟನ್, ಎಸ್‌ಎಸ್‌ಪಿ 1,768 ಮೆಟ್ರಿಕ್ ಟನ್ ರಸಗೊಬ್ಬರಗಳು ದಾಸ್ತಾನಿದೆ. ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಹಾಗೂ ರಸಗೊಬ್ಬರಗಳನ್ನು ಪರವಾನಗಿ ಹೊಂದಿದ ಕೃಷಿ ಪತ್ತಿನ ಸಹಕಾರ ಸಂಘಗಳು, ಖಾಸಗಿ ಮಾರಾಟಗಾರರಿಂದ ಖರೀದಿಸಬಹುದು.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ಮುಸುಕಿನ ಜೋಳ, ಭತ್ತ, ರಾಗಿ, ಇತ್ಯಾದಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಪ್ರಸ್ತುತ ರೈತ ಸಂಪರ್ಕ ಕೇಂದ್ರ, ಕೆಎಸ್‌ಎಸ್‌ಸಿ, ಎನ್‌ಎಸ್‌ಸಿಗಳಲ್ಲಿ ಭತ್ತ 5,712 ಕ್ವಿಂಟಾಲ್, ರಾಗಿ 3,360 ಕ್ವಿಂಟಾಲ್, ಮುಸುಕಿನ ಜೋಳ 240 ಕ್ವಿಂಟಾಲ್, ಹೆಸರು 186 ಕ್ವಿಂಟಾಲ್, ಅಲಸಂದೆ 434 ಕ್ವಿಂಟಾಲ್, ಉದ್ದು 32 ಕ್ವಿಂಟಾಲ್, ತೊಗರಿ 16 ಕ್ವಿಂಟಾಲ್, ಸೂರ್ಯಕಾಂತಿ 10 ಕ್ವಿಂಟಾಲ್ ಉಳಿದಂತೆ ಬೇಡಿಕೆ ಅನುಸಾರ ರೈತ ಸಂಪರ್ಕ ಕೇಂದ್ರ, ಕೆಎಸ್‌ಎಸ್‌ಸಿ, ಎನ್‌ಎಸ್‌ಸಿಗಳಲ್ಲಿ ಒಟ್ಟು 10,122 ಕ್ವಿಂಟಾಲ್ ಬಿತ್ತನೆ ಬೀಜಗಳ ದಾಸ್ತಾನಿರುತ್ತದೆ.

ಸಾಮಾನ್ಯ ವರ್ಗದ ರೈತರಿಗೆ ದ್ವಿದಳ ಧಾನ್ಯ ಬೆಳೆಗಳಿಗೆ ಪ್ರತಿ ಕೆಜಿಗೆ 25 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 37.50 ರೂ. ಸಹಾಯಧನ, ಮುಸುಕಿನ ಜೋಳ ಬಿತ್ತನೆ ಬೀಜಕ್ಕೆ ಸಾಮಾನ್ಯ ವರ್ಗದ ರೈತರಿಗೆ ದ್ವಿದಳ ಧಾನ್ಯ ಬೆಳೆಗಳಿಗೆ ಪ್ರತಿ ಕೆಜಿಗೆ 20 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 30 ರೂ. ಸಹಾಯಧನ ಒದಗಿಸಲಾಗುತ್ತಿದೆ. ರೈತರು ಬಿತ್ತನೆ ಬೀಜ ಖರೀದಿಸುವಾಗ ತಪ್ಪದೇ ಅಧಿಕೃತ ರಸೀದಿ ಪಡೆಯಬೇಕು. ರಸೀದಿಯಲ್ಲಿ ಲಾಟ್ ನಂಬರ್ ಮತ್ತು ಮಾರಾಟ ಬೆಲೆ ವಿವರಗಳನ್ನು ನಮೂದಿಸಿರುವ ಕುರಿತು ಖಾತರಿಪಡಿಸಿಕೊಳ್ಳಬೇಕು. ಇಲಾಖೆಯಿಂದ ಮಾರಾಟ ಪರವಾನಗಿ ಹೊಂದಿರುವ ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದ ಬೀಜವನ್ನು ಖರೀದಿಬೇಕು. ಬಿತ್ತನೆ ಬೀಜಗಳ ಪ್ಯಾಕಿಂಗ್‌ನಲ್ಲಿ ವ್ಯಾಲಿಡಿಟಿ ಅವಧಿಯನ್ನು ಗಮನಿಸಿ ಖರೀದಿಸುವುದು ಹಾಗೂ ಯಾವುದೇ ಮಾರಾಟಗಾರರಿಂದ ಪ್ಯಾಕ್ ರಹಿತ ಬಿತ್ತನೆ ಬೀಜಗಳನ್ನು ಖರೀದಿ ಮಾಡಬಾರದೆಂದು ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆ ಅನುಸಾರ ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೇಟ್, ಬೋರಾಕ್ಸ್, ಸಾವಯವ ಗೊಬ್ಬರಗಳಾದ ಎನ್‌ಪಿಕೆ ಕನ್ಸೇರ್ಷಿಯಾ, ಪಿಎಸ್‌ಬಿ, ಸಸ್ಯ ಸಂರಕ್ಷಣಾ ಔಷಧಗಳಾದ ಎಮೊಮೆಕ್ಟಿನ್ ಬೆನ್‌ಜೋಯೇಟ್, ಕ್ಲೋರೋಪೈರಿಪಾಸ್, ಕ್ವಿನಾಲಾಪಾಸ್, ಟ್ರೈಕೋಡರ್ಮ, ಬೇವಿನ ಎಣ್ಣೆ, ಇತ್ಯಾದಿ ಪರಿಕರಗಳನ್ನು ದಾಸ್ತಾನಿಕರಿಸಲಾಗಿದೆ. ಈ ಎಲ್ಲ ಪರಿಕರಗಳನ್ನು ಸಹಾಯಧನದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ. ರಸಗೊಬ್ಬರ, ಲಘುಪೋಷಕಾಂಶ ಹಾಗೂ ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಅವರು ತಿಳಿಸಿದ್ದಾರೆ.