ಕೊಳ್ಳೇಗಾಲ: ಪಟ್ಟಣದ ಸಕ್ಕರೆ ಕಾರ್ಖಾನೆ ಶಾಖಾ ಕಚೇರಿ ಮುಂಭಾಗ ರೈತ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗೆ ಒತ್ತಾಯಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ಮುಖಂಡ ಅಣಗಳ್ಳಿ ಬಸವರಾಜು ಮಾತನಾಡಿ, ರೈತರ ಹೋರಾಟದ ಫಲವಾಗಿ ಕಬ್ಬು ಬೆಳೆಗೆ 2949 ರೂ. ಅನ್ನು ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ನೀಡುತ್ತಿದೆ. ಆದರೆ, ಇದೀಗ ನೀಡುತ್ತಿರುವ ಬೆಲೆ ಸಾಕಾಗುವುದಿಲ್ಲ. ಕನಿಷ್ಠ 3,500 ರೂ.ಗಳನ್ನು ನಿಗದಿ ಮಾಡಬೇಕು. ಹಾಗೇ ಕಬ್ಬು ಸಾಗಣೆ ಮಾಡುವ ಲಾರಿ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದನ್ನು ತಪ್ಪಿಸಬೇಕೆಂದು ಆಗ್ರಹಿಸಿದರು.
ಕಾರ್ಖಾನೆ ಅಧಿಕಾರಿ ಮಹದೇವಪ್ಪ ಪ್ರತಿಭಟನಾಕಾರರ ಜತೆ ಚರ್ಚಿಸಿ ಪ್ರತಿ ಟನ್‌ಗೆ ಈಗಾಗಲೇ 2,949 ರೂ.ಗಳನ್ನು ಖಾತೆಗೆ ಜಮಾ ಮಾಡಲಾಗಿದೆ. ನಿಮ್ಮ ಬೇಡಿಕೆಯಂತೆ ಸರ್ಕಾರ ನಿಗದಿ ಮಾಡಿದ್ದರೆ ಕಾರ್ಖಾನೆ ನೀಡಲು ಬದ್ಧವಾಗಿದೆ. ಲಾರಿ ಚಾಲಕರು ನಿಗದಿ ಮಾಡಿದ್ದ ಹಣಕ್ಕಿಂತ ಹೆಚ್ಚು ಕೇಳಿದವರ ವಿರುದ್ಧ ದೂರು ಕೊಟ್ಟರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ರೈತ ಮುಖಂಡ ಮಾಲಂಗಿ ರೇಚಣ್ಣ, ರಾಮಕೃಷ್ಣ, ಲಕ್ಷ್ಮಣಮೂರ್ತಿ, ಮಾಲಂಗಿ ಬಸವರಾಜು, ವರದರಾಜು ಮೋಳೆ, ನಾಗರಾಜು ಹಿತ್ತಲದೊಡ್ಡಿ, ಮೋಳೆ ರಾಜಣ್ಣ, ಮಾದೇಶ್, ಆರ್‌ಟಿಐ ಕಾರ್ಯಕರ್ತ ದಶರಥ, ಹಳೇ ಅಣಗಳ್ಳಿ ಶಿವಸ್ವಾಮಿ, ಶಿವಮೂರ್ತಿ ತೇರಂಬಳ್ಳಿ, ಸದಾಶಿವ, ಬೂದಿತಿಟ್ಟು ಶಿವಕುಮಾರ್, ಮರಿಸ್ವಾಮಿ ಇತರರಿದ್ದರು.