ಜಿಲ್ಲೆ

ಬೇಡಿಕೆಗೆ ಈಡೇರಿಕೆಗೆ ಒಗ್ಗಟ್ಟು ಅವಶ್ಯ ; ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಶ್ರೀನಿವಾಸ್ ಅಭಿಮತ

ತುಮಕೂರು: ಸರ್ಕಾರಿ ವೈದ್ಯರು ಬೇಡಿಕೆಗಳನ್ನು ಸರ್ಕಾರದೊಂದಿಗೆ ಚರ್ಚಿಸಿ ಈಡೇರಿಸಿಕೊಳ್ಳಬೇಕಿದೆ, ಈ ನಿಟ್ಟಿನಲ್ಲಿ ಮೊದಲು ನಮ್ಮಲ್ಲಿ ಒಗ್ಗಟ್ಟು ಪ್ರದರ್ಶನವಾಗಬೇಕು ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಜಿ.ಎ.ಶ್ರೀನಿವಾಸ್ ತಿಳಿಸಿದರು.

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ನಗರದ ಡಾ.ರಾಘವೇಂದ್ರ ಗಾರ್ಡನ್ ಹೌಸ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ತುಮಕೂರು ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿ’ಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕರೊನಾ ಸಂದರ್ಭದಲ್ಲಿ ಸರ್ಕಾರಿ ವೈದ್ಯರು ದಿನದ 24 ಗಂಟೆಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ಸರ್ಕಾರ ಕೂಡ ಪ್ರಶಂಸೆ ವ್ಯಕ್ತಪಡಿಸಿ, ಹಲವು ಬೇಡಿಕೆಗಳಿಗೆ ಅಸ್ತು ನೀಡಿದೆ, ವೇತನ ಹೆಚ್ಚಳದ ಬೇಡಿಕೆ ಸಹ ಈಡೇರಿಸುವ ವಿಶ್ವಾಸವಿದೆ ಎಂದರು.

ಆರೋಗ್ಯ ಭವನ ನಿರ್ಮಾಣಕ್ಕೆ ಈಗಾಗಲೇ ಕೆಲವು ವೈದ್ಯರು ಹಣ ನೀಡಿದ್ದಾರೆ. 1.75 ಕೋಟಿ ರೂ. ಸಂಘದ ಖಾತೆಯಲ್ಲಿದ್ದು, ಆರೋಗ್ಯ ಸೌಧದ ಪಕ್ಕದಲ್ಲೇ ಭವನ ನಿರ್ಮಾಣ ಮಾಡಬೇಕಿದೆ. ಈ ಹಿಂದಿನ ಅಧ್ಯಕ್ಷ ರವೀಂದ್ರ ಅವರ ಅವಧಿಯಲ್ಲಿ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಕುಟುಂಬದೊಂದಿಗೆ ದೂರ ಉಳಿದಿದ್ದ ಸರ್ಕಾರಿ ವೈದ್ಯರು, ತಮ್ಮ ಜೀವದ ಹಂಗನ್ನು ತೊರೆದು ಚಿಕಿತ್ಸೆ ನೀಡಿದ್ದರು. ಇಂತಹ ಸಂದರ್ಭದಲ್ಲಿ ವೈದ್ಯರು ಮತ್ತು ಅವರ ಕುಟುಂಬದವರನ್ನು ಒಂದೆಡೆ ಸೇರಿಸಿ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಎಚ್.ಆರ್.ರಾಜಶೇಖರ್ ಹೇಳಿದರು.

ಕರೊನಾ ಸಂಕಷ್ಟ ಸಮಯದಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯರ ಗುಣಮಟ್ಟ ಅಳೆಯುವ ಸಂದರ್ಭ ಬಂದಾಗ ಎಲ್ಲರೂ ಅದಕ್ಕೆ ಸ್ಪಂದಿಸಿ ಉತ್ತಮ ಚಿಕಿತ್ಸೆ ನೀಡಿದ್ದಾರೆ ಎಂದು ವೈದ್ಯ ವೃಂದಕ್ಕೆ ಸಂಘದ ಚುನಾಯಿತ ರಾಜ್ಯಾಧ್ಯಕ್ಷ ದೇಸಾಯಿ ಅಭಿನಂದನೆ ಸಲ್ಲಿಸಿದರು.

ಕಾರ್ಯದರ್ಶಿ ಡಾ.ಪ್ರಕಾಶ್, ಡಾ.ರವೀಂದ್ರನಾಥ್ ಮೇಟಿ, ಖಜಾಂಚಿ ಡಾ.ಸೈಯದ್ ಸಿರಾಜುದ್ದೀನ್ ಮದನಿ, ಜಿಲ್ಲಾ ಕಾರ್ಯದರ್ಶಿ ಡಾ.ಸಿ.ಆರ್.ಮೋಹನ್, ಖಜಾಂಚಿ ಡಾ.ಜಿ.ಟಿ.ಚಂದನ್, ರಾಜ್ಯ ಉಪಾಧ್ಯಕ್ಷ ಡಾ.ರಾಜಕುಮಾರ್, ಜಂಟಿ ಕಾರ್ಯದರ್ಶಿ ಡಾ.ಪಿ.ಡಿ.ತಿಮ್ಮರಾಜು, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಮತ್ತಿತರರು ಇದ್ದರು.