ಚಿತ್ರದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದು ಗುರುವಾರ ಆರು ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಿದ್ದ ಗ್ರಾಮ ಆಡಳಿತಾ ಧಿಕಾರಿಗಳು, ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮುಂದುವರಿಸಿದರು.
ಕೆಲಸ ಬಹಿಷ್ಕಾರದೊಂದಿಗೆ ಬೇಡಿಕೆ ಈಡೇರಿಸಲೇಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಡೆದ ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ವಿಎಗಳು ಭಾಗವಹಿಸಿದ್ದರು.
ವೇತನ ಶ್ರೇಣಿ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿರುವ ಅವರು, ಸೆ.30 ರಿಂದ ಕೆಲಸಕ್ಕೆ ಸಾಮೂಹಿಕ ರಜೆ ಹಾಕಿ ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ. ಇವರ ಪ್ರತಿಭಟನೆಯಿಂದಾಗಿ ಗುರುವಾರದಿಂದಲೇ, ಹಲವು ಕೆಲಸಗಳಿಗೆ ಹಿನ್ನಡೆಯಾಗಿದ್ದು ಜನರು ತೊಂದರೆ ಅನುಭವಿಸುವಂತಾಯಿತು.
ಮೊಬೈಲ್ ಆ್ಯಪ್, ವೆಬ್ ಅಪ್ಲಿಕೇಷನ್ ಹಾಗೂ ಲೇಖನಿ ಸ್ಥಗಿತಗೊಳಿಸಿ ನಡೆಸುತ್ತಿರುವ ಪ್ರತಿಭಟನೆ ಹೀಗೆಯೇ ಮುಂದವರಿದರೆ ಕಂದಾಯ ಇಲಾಖೆ ಕೆಲಸಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ, ಸಾರ್ವಜನಿಕರಿಗೂ ತೊಂದರೆಯಾಗಲಿದೆ.
ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ವಿ.ಪಾಂಡುರಂಗಪ್ಪ, ಜಿಲ್ಲಾಧ್ಯಕ್ಷ ಮಾಲತೇಶ ಮುದ್ದಜ್ಜಿ, ಕಂದಾಯ ಇಲಾಖೆ ನೌಕರರ ಜಿಲ್ಲಾಧ್ಯಕ್ಷ ಬಿ.ಎಸ್.ಸಿದ್ದೇಶಿ, ಎಂ.ಪಿ.ಸಂಪತ್‌ಕುಮಾರ್, ಡಿ.ಎಸ್.ವಾಲೀಕರ್, ಎಂ.ಪ್ರಕಾಶ್, ಹರೀಶ್, ಗಂಗಾಧರ್, ಬಿ.ಗಂಗಾಧರ್, ಕಾವ್ಯ, ರೇಖಾ, ಬಿ.ಆರ್.ಪ್ರಿಯಾ, ಎನ್.ಜೆ.ತಾಯಕ್ಕ, ಶಿವಕುಮಾರ್, ರಾಘವೇಂದ್ರ ವಡೇರ್, ಜಿ.ಎಸ್.ಸುರೇಶ್, ಮಹಮದ್ ಇರ್ಫಾನ್, ಶ್ರೀನಿವಾಸ್ ಇದ್ದರು.