ಜಿಲ್ಲೆ

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ

ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರೈತ ಸಂಘ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಪ್ರತಿಭಟನಾ ನಿರತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಮಿತಿಯ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಕರೊನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ನೆಲಕಚ್ಚಿದ್ದು, ಸಣ್ಣ-ಮಧ್ಯಮ ಉದ್ಯಮಗಳು ಅತಂತ್ರಕ್ಕೆ ಗುರಿಯಾಗಿವೆ. ಮೋದಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಹಲವಾರು ಕಾಯ್ದೆಗಳಿಗೆ ತಿದ್ದುಪಡಿ ತರುವ ಕೆಲಸ ಮಾಡುತ್ತಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಯಡಿಯೂರಪ್ಪ ಸರ್ಕಾರ, ರೈತರ ಕೃಷಿಗೆ ಡಬಲ್ ಲಾಭ ದೊರೆಯುತ್ತದೆ ಎಂದು ಹೇಳಿರುವುದು ಶುದ್ಧ ಸುಳ್ಳು. ವಿವಿಧ ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಸ್ವಾಮಿನಾಥನ್ ವರದಿಗೆ ದೂರವಾಗಿದೆ ಎಂದರು.

ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಯಿಂದ ಮೆಣಸಿನ ಕಾಯಿ, ಆಲೂಗಡ್ಡೆ, ಈರುಳ್ಳಿ, ಮೆಕ್ಕೆಜೋಳ, ಸಿರಿಧಾನ್ಯ ಇತರ ಕೃಷಿ ಉತ್ಪನ್ನಗಳ ಮೇಲೆ ಸರ್ಕಾರದ ನಿಯಂತ್ರಣ ತಪ್ಪಲಿದೆ. ಹಾಗಾಗಿ ಕಂಪೆನಿಗಳು ಖರೀದಿ ಮತ್ತು ದೊಡ್ಡ ಮಟ್ಟದ ದಾಸ್ತಾನು ಮಾಡುವುದರಿಂದ ಗ್ರಾಹಕರನ್ನು ತೀವ್ರವಾಗಿ ಶೋಷಣೆಗೆ ಒಳಗಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಇ.ಸಣ್ಣಪ್ಪ, ಸದಸ್ಯರಾದ ಎಚ್.ಜೆ.ಜಯಣ್ಣ, ಎನ್.ಟಿ.ಚಂಗಪ್ಪ, ಮಹಿಳಾ ಸಂಘದ ಅಧ್ಯಕ್ಷೆ ಅನಿತಾ, ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಜಿ.ಕಾರ್ಯದರ್ಶಿ ಎಸ್.ಆರ್.ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.