ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಬನ್ನಿಮಂಟಪದಲ್ಲಿರುವ ಎಲ್‌ಐಸಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಜೀವ ವಿಮಾ ನಿಗಮವು ಇತ್ತೀಚೆಗೆ ಪ್ರತಿನಿಧಿಗಳಿಗೆ ನೀಡುತ್ತಿರುವ ಕಮಿಷನ್ ದರವನ್ನು ಕಡಿಮೆ ಮಾಡಿದೆ. ಇದರಿಂದ ಲಕ್ಷಾಂತರ ಪ್ರತಿನಿಧಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿರುವ ಇಂತಹ ದಿನಮಾನಗಳಲ್ಲಿ ಕಮಿಷನ್ ದರವನ್ನು ಹೆಚ್ಚಳ ಮಾಡುವ ಬದಲು ಕಡಿಮೆ ಮಾಡಿರುವುದು ಅನ್ಯಾಯದ ಕ್ರಮವಾಗಿದೆ. ಕೂಡಲೇ ಕಮಿಷನ್ ದರವನ್ನು ಹೆಚ್ಚಿಸಬೇಕು ಅಥವಾ ಯಥಾಸ್ಥಿತಿ ಕಾಪಾಡಬೇಕು. ಹಳೆಯ ಆಯೋಗದ ದರವನ್ನಾದರೂ ಮರುಸ್ಥಾಪಿಸಬೇಕೆಂದು ಆಗ್ರಹಿಸಿದರು.
ಪಾಲಿಸಿದಾರರ ಬೋನಸ್ ದರವನ್ನು ಕೂಡಲೇ ಹೆಚ್ಚಿಸಬೇಕು. ಇದರಿಂದ ಪಾಲಿಸಿದಾರರು ಮತ್ತಷ್ಟು ಹೊಸಬರಿಗೆ ಪ್ರೇರಣೆಯಾಗಲಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು
ಈ ಹಿಂದೆ ಸಮ್ ಅಶ್ಯೂರ್ಡ್ (ಭರವಸೆಯ ಮೊತ್ತ) ಒಂದು ಲಕ್ಷ ರೂ. ಇತ್ತು. ಇದೀಗ ಅದನ್ನು 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಕನಿಷ್ಠ ಆದಾಯವುಳ್ಳ ಜನರು ವಿಮಾ ಪಾಲಿಸಿ ಮಾಡಲು ಕಷ್ಟವಾಗುತ್ತದೆ. ನಿಗಮವು ಕೂಡಲೇ ಈ ಹಿಂದೆ ಇದ್ದ ಕನಿಷ್ಠ ಒಂದು ಲಕ್ಷ ರೂ. ಮೊತ್ತದ ಭರವಸೆಯನ್ನು ಮರುಸ್ಥಾಪಿಸಬೇಕು.
ಅಲ್ಲದೆ ಪಾಲಿಸಿದಾರರು ಒಂದು ವರ್ಷಕ್ಕೆ ವಿಮೆ ವಾಪಸ್ ಪಡೆದಲ್ಲಿ ಕಮಿಷನ್ ನಗದು ಹಿಂದಕ್ಕೆ ಪಡೆಯುವ ಪದ್ಧತಿ(ಕ್ಯಾಶ್ ಬ್ಯಾಕ್) ಜಾರಿ ಮಾಡಲಾಗಿದೆ. ಇದನ್ನು ವಿಮಾ ಪ್ರತಿನಿಧಿಗಳು ಸಂಪೂರ್ಣವಾಗಿ ವಿರೋಧಿಸುತ್ತಿದ್ದು, ಕೂಡಲೇ ಈ ಪದ್ಧತಿಯನ್ನು ಕೈಬಿಡಬೇಕು. ಜತೆಗೆ, ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರೀಮಿಯಂ ದರವನ್ನೂ ಸಹ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಡಿ.ಪುಟ್ಟಸ್ವಾಮಿ, ಎಂ.ಪ್ರಭಾಕರ್, ಎಸ್.ಸತೀಶ್, ಎಲ್.ಪ್ರಸಾದ್ ಸೇರಿದಂತೆ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.