ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಮೀನುಗಾರ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ನಗರದ ಖಾಸಗಿ ರೆಸಿಡೆನ್ಸಿಯಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರು ಆರ್ಥಿಕವಾಗಿ ಕಡುಬಡವರಾಗಿದ್ದಾರೆ. ಈ ವರ್ಷದಲ್ಲಿ ಅತ್ಯಧಿಕ ಮಳೆಯಿಂದ ಕೆರೆ ಕಟ್ಟೆಗಳು ತುಂಬಿ ಕೊಡಿ ಬಿದ್ದು, ಕೆರೆಯಲ್ಲಿದ್ದ ಮೀನು ಮತ್ತು ಮರಿಗಳು ಹೊರಹೋಗಿರುವ ಕಾರಣ ತುಂಬ ನಷ್ಟವಾಗಿದೆ. ಆದ್ದರಿಂದ ಮೀನು ಮತ್ತು ಮೀನುಮರಿಗಳಿಗೆ ತಗುಲಿರುವ ವೆಚ್ಚವನ್ನು ಸರ್ಕಾರ ಭರಿಸಿಕೊಡಬೇಕು. ಜಿಲ್ಲೆಯಲ್ಲಿ ವಸತಿ ರಹಿತ ಬಡ ಮೀನುಗಾರರ ಕುಟುಂಬಗಳಿದ್ದು, ಅವರಿಗೆಲ್ಲ ವಸತಿ ಸೌಲಭ್ಯ ಕಲ್ಪಿಸಿ ಕೊಡಬೇಕು. ನಿವೇಶನ ರಹಿತ ಮೀನುಗಾರ ಕುಟುಂಬಗಳಿಗೆ ನಿವೇಶನಗಳನ್ನು ಕೊಡಬೇಕು. ಮೀನುಗಾರರ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ವಿಶೇಷ ಆರ್ಥಿಕ ನೆರವು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ಮೀನುಗಾರರು ಮೀನು ಮಾರಾಟ ಮಾಡಲು ವ್ಯವಸ್ಥಿತ ಮೀನು ಮಾರುಕಟ್ಟೆ ವ್ಯವಸ್ಥೆ ಒದಗಿಸಿಕೊಡಬೇಕು. ಮೀನುಗಾರರಿಗೆ ಶೂನ್ಯ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಮೀನುಗಾರಿಕೆ ಉಪನಿರ್ದೇಶಕ ಗಿರೀಶ್, ಸಹಾಯಕ ನಿರ್ದೇಶಕ ಪ್ರಶಾಂತ್, ಚಾಮರಾಜೇಶ್ವರ ರೈತ ಮೀನು ಉತ್ಪಾದಕರ ಕಂಪನಿ ಅಧ್ಯಕ್ಷ ಕೆ.ಲಿಂಗರಾಜು, ಸಿಇಒ ಪಿ.ನಂಜುಂಡಸ್ವಾಮಿ, ವೃತ್ತಿನಿರತ ಎಸ್ಸಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಕೆಂಪರಾಜು, ಕಾರ್ಯದರ್ಶಿ ಕೃಷ್ಣರಾಜು, ಚಾಮರಾಜನಗರ ತಾಲೂಕು ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಗುರುಸಿದ್ದಯ್ಯ, ಗುಂಡ್ಲುಪೇಟೆ ತಾಲೂಕು ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಮಾದಶೆಟ್ಟಿ, ಮಹಿಳಾ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಶಿವನಾಗಮ್ಮ, ನಿಸರ್ಗ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಚೆನ್ನಿಗಶೆಟ್ಟಿ, ಕಾವೇರಿ ಪರಿಶಿಷ್ಟ ಪಂಗಡ ಮೀನುಗಾರರ ಸಹಕಾರ ಸಂಘದ ಪುಟ್ಟರಾಜನಾಯಕ ಇತರರು ಇದ್ದರು.