ಜಿಲ್ಲೆ

ಬೇಡಿಕೆ ಈಡೇರಿಸಲು ವರ್ತಕರಿಂದ ಮನವಿ

ಲಕ್ಷ್ಮೇಶ್ವರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಲಕ್ಷ್ಮೇಶ್ವರ ವ್ಯಾಪಾರಸ್ಥರ ಸಂಘದ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.

ರಸ್ತೆಗಳು, ಪಾದಚಾರಿ ಮಾರ್ಗ, ಒಳಚರಂಡಿ, ಬೀದಿ ದೀಪಗಳು, ಶೌಚಗೃಹ ಸೇರಿ ಅನೇಕ ಕೆಲಸ ಆಗಬೇಕಾಗಿದೆ. ಉದ್ಯಾನ, ಈಜುಕೊಳ, ಒಳಾಂಗಣ ಕ್ರೀಡಾಂಗಣಗಳು ಇಲ್ಲ. ಹಳ್ಳಿಗಳಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಳಪೆ ಸ್ಥಿತಿಯಲ್ಲಿವೆ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗಿದೆ ಎಂದರು.

ಪಟ್ಟಣದಿಂದ ದೊಡ್ಡೂರು, ಸೂರಣಗಿ ಬಾಲೇಹೊಸೂರು, ಪು.ಬಡ್ನಿ, ಕುಂದ್ರಹಳ್ಳಿ, ಸೇರಿ ಅನೇಕ ಹಳ್ಳಿಗಳಿಗೆ ಉತ್ತಮ ಸಂಪರ್ಕ ರಸ್ತೆಗಳನ್ನು ಕಲ್ಪಿಸುವುದು, ಯಲವಿಗಿ- ಗದಗ ಹೊಸ ರೈಲು ಮಾರ್ಗದ ಕೆಲಸ ಶೀಘ್ರ ಪ್ರಾರಂಭಿಸಬೇಕು. ವಾಸ್ಕೋ ಡ ಗಾಮಾ - ಯಶವಂತಪುರ, ಗೋಲಗುಂಬಜ್ ಎಕ್ಸ್​ಪ್ರೆಸ್ ಸೇರಿ ವಿವಿಧ ಎಕ್ಸ್​ಪ್ರೆಸ್ ರೈಲುಗಳನ್ನು ಯಲವಿಗಿ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳಾದ ಅಶೋಕ ಬಟಗುರ್ಕಿ, ಮಾಲತೇಶ ಅಗಡಿ, ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಶಕ್ತಿ ಕತ್ತಿ, ಸುನೀಲ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ಶಿವಯೋಗಿ ಅಂಕಲಕೋಟಿ, ಸಿದ್ದನಗೌಡ ಬಳ್ಳೊಳ್ಳಿ, ಡಿ.ಡಿ. ಮುಥಾ ಅನೇಕರಿದ್ದರು.