ಚಿಕ್ಕಮಗಳೂರು ಡಿಸಿ ಕಚೇರಿ ಶಿರಸ್ತೇದಾರ್ ಹೇಮಂತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ತಾರಾಕೃಷ್ಣ, ಮೈನಾ, ಜ್ಯೋತಿ, ಗೀತಾ, ಪ್ರೇಮಾ ಮತ್ತಿತರರಿದ್ದರು. 
ಜಿಲ್ಲೆ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಶಾಕಾರ್ಯಕರ್ತೆಯರ ಮನವಿ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿರುವಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ೧೦ ಸಾವಿರ ರೂ. ಹಾಗೂ ಬಜೆಟ್‌ನಲ್ಲಿ ೧ ಸಾವಿರ ರೂ. ಹೆಚ್ಚಳ ಮಾಡುವಂತೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾಕಾರ್ಯಕರ್ತೆಯರ ಸಂಘ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಸಂಘದ ಜಿಲ್ಲಾಧ್ಯಕ್ಷೆ ತಾರಾಕೃಷ್ಣ ನೇತೃತ್ವದಲ್ಲಿ ಶುಕ್ರವಾರ ಆಶಾಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೇದಾರ್ ಹೇಮಂತ್‌ಕುಮಾರ್ ಅವರಿಗೆ ತಮ್ಮ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.

ಈಗಾಗಲೇ ಕಳೆದ ಜನವರಿಯಲ್ಲಿ ರಾಜ್ಯದ ಆಶಾಕಾರ್ಯಕರ್ತೆಯರು ಬೆಂಗಳೂರಿನಲ್ಲಿ ನಡೆಸಿದ ಅಹೋರಾತ್ರಿ ಹೋರಾಟದ ಸಂದರ್ಭದಲ್ಲಿ ಜ. ೧೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟ ನಿರತ ಆಶಾ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವ ಕುರಿತು ಆರೋಗ್ಯ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದರು ಎಂದರು.

ಪ್ರಸಕ್ತ ಆರ್ಥಿಕ ವರ್ಷ ೨೦೨೫ನೇ ಏಪ್ರಿಲ್‌ನಿಂದ ಪ್ರತಿ ತಿಂಗಳು ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ೧೦ ಸಾವಿರ ರೂ. ಗೌರವಧನವನ್ನು ನೀಡಲಾಗುವುದು. ಕಾಂಪೋನೆAಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಈಗ ಸದರಿ ಬಜೆಟ್‌ನಲ್ಲಿ ಯಾವುದೇ ಘೋಷಣೆಗಳನ್ನು ಮಾಡಿಲ್ಲ ಎಂದು ದೂರಿದರು.

ಈ ಆಯ-ವ್ಯಯದಲ್ಲಿ ರಾಜ್ಯದ ಸುಮಾರು ೨.೫೦ ಲಕ್ಷ ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರಿಗೆ ೧ ಸಾವಿರ ರೂ. ಹೆಚ್ಚಳ ಮಾಡಿರುವ ಮಾದರಿಯಲ್ಲಿ ೪೨ ಸಾವಿರ ಆಶಾಕಾರ್ಯಕರ್ತೆಯರಿಗೂ ೧ ಸಾವಿರ ರೂ. ಹೆಚ್ಚಳ ಮಾಡಿ ಬಜೆಟ್‌ನಲ್ಲಿ ಸೇರಿಸಿ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಕೂಡಲೇ ಆರೋಗ್ಯ ಸಚಿವರ ನೇತೃತ್ವದಲ್ಲಿ ಇಲಾಖೆಯಿಂದ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮೈನಾ, ಜ್ಯೋತಿ, ಗೀತಾ, ಪ್ರೇಮ, ನೇತ್ರಾವತಿ, ಸಾವಿತ್ರಿ, ಅನ್ನಪೂರ್ಣ, ಶಾಂತ, ಕವಿತ, ಶೋಭ, ನಾಗಮ್ಮ, ಭಾಗ್ಯ, ಸುನಿತ, ಪ್ರೇರಣ ಮತ್ತಿತರರಿದ್ದರು.