ಜಿಲ್ಲೆ

ಬೇಡಗಂಪಣ ಕುಲದೇವಿಯರ ಪೂಜೆ

ಮಹದೇಶ್ವರ ಬೆಟ್ಟ: ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಹಳೆಯೂರಿನಲ್ಲಿ ಬೇಡಗಂಪಣರ ಕುಲದ ಶಕ್ತಿ ದೇವತೆಗಳ ವಿಶೇಷ ಪೂಜೆ ಮಂಗಳವಾರ ಜರುಗಿತು.

ಮಾರಿಹೊಲದಲ್ಲಿ ಗ್ರಾಮದ ದೇವತೆ ಕಟ್ಟೆಮಾರಮ್ಮನ ಆರಾಧನೆ ಹಾಗೂ ಬೇಡಗಂಪಣರ ಕುಲದೇವತೆ ಶಿವನವ್ವ ತಾಯಿಯ ಪೂಜೆಯನ್ನು ಬೇಡಗಂಪಣರ ಪದ್ಧತಿ ಪ್ರಕಾರ ಮಾಡಲಾಯಿತು. ಈ ಕುಲದ ಸಮಸ್ತ ಪಾಲು, ಪಂಗಡದವರು ಕುಟುಂಬ ಸಮೇತ ದೇಗುಲಕ್ಕೆ ಬಂದು ಪೂಜೆ ಸಲ್ಲಿಸಿದರು.

ಬೇಡಗಂಪಣರ ಕುಲದ ಸುಮಾರು 15 ತಂಬಡಿಗಳು ಮಂಗಳವಾರ ಬೆಳಗ್ಗೆಯಿಂದ ಉಪವಾಸವಿದ್ದು, ಕೆಂಪು ಮಡಿವಸ್ತ್ರ ಧರಿಸಿಕೊಂಡು, ಬಾಯಿಗೆ ಬಟ್ಟೆ ಕಟ್ಟಿಕೊಂಡು ಪೂಜೆ ನೆರವೇರಿಸಿದರು. ದೇವತೆಗಳ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ, ಗ್ರಾಮದ ಬಾವಿಯಿಂದ ಮಜ್ಜನ ತಂದರು. ಈ ವೇಳೆ ತಮಟೆ, ಜಾಗಟೆ ಹಾಗೂ ನಗಾರಿಯ ವಾದ್ಯಗಳು ಮೊಳಗಿದವು.

ದೇವಿಯರಿಗೆ ಪಂಚಾಮೃತ ಮಾಡಿ ನೈವೇದ್ಯ ಇಟ್ಟು, ಪಡಿತರ ಪೂಜೆ ನೆರವೇರಿಸಲಾಯಿತು. ಕಟ್ಟೆಮಾರಿಯಮ್ಮ, ಶಿವನವ್ವ ತಾಯಿ ಹಾಗೂ ಕಟ್ಟೆಯ ಬಸವನಿಗೆ 101 ಬಾರಿ ಧೂಪದ ಆರತಿ ಸೇವೆ, 101 ಬಾರಿ ಉತ್ತರಾಣಿ ಕಡ್ಡಿಯ ಬತ್ತಿಯ ಆರತಿ, 101 ಬಾರಿ ತಂಬಿಟ್ಟಿನ ನೈವೇದ್ಯ ಮಾಡಲಾಯಿತು. ನಂತರ ಬೇಡಗಂಪಣ ಕುಲದ ಸುಮಾರು 18 ಗ್ರಾಮಗಳ ಭಕ್ತರು ದೇವಿಯರ ದರ್ಶನ ಪಡೆದುಕೊಂಡರು. ಇದೇ ವೇಳೆ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.