ಹೊಸನಗರ: ರಾಣೇಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ ನಗರದಿಂದ ಜಯನಗರದವರೆಗೆ ಸಂಪೂರ್ಣ ಹದಗೆಟ್ಟಿದ್ದು ಗ್ರಾಮಸ್ಥರ ಆಕ್ರೋಶದ ಬೆನ್ನೆಲ್ಲೆ ದುರಸ್ತಿ ಕಾಮಗಾರಿಗೆ ಶುಕ್ರವಾರ ನಗರ ಚಿಕ್ಕಪೇಟೆ ಸರ್ಕಲ್‌ನಲ್ಲಿ ಚಾಲನೆ ನೀಡಲಾಯಿತು. ಆದರೆ ಎಸ್ಟಿಮೇಟ್ ಇಲ್ಲದೆ ಹೆದ್ದಾರಿ ಇಂಜಿನಿಯರ್ ಗೈರುಹಾಜರಿಯಲ್ಲಿ ಕಾಮಗಾರಿ ಆರಂಭಿಸಿದ ಹಿನ್ನೆಲೆಯಲ್ಲಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕಿಡಿಕಾರಿದ ಸಾಮಾಜಿಕ ಕಾರ್ಯಕರ್ತ ಸುಧೀಂದ್ರ ಪಂಡಿತ್ ಇಂಜಿನಿಯರ್‌ಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ. ಅವರಿಂದ ಸಮರ್ಪಕ ಉತ್ತರ ಸಿಗದ ಕಾರಣ, ಬೇಕಾಬಿಟ್ಟಿ ಕಾಮಗಾರಿ ಮಾಡಿ ತೇಪೆ ಹಚ್ಚೋದು ಬೇಡ. ಈ ಹಿಂದೆ ಮಾಡಿದ ದುರಸ್ತಿ ಕಾಮಗಾರಿ ಕೆಲವೇ ದಿನಗಳಲ್ಲಿ ಕಿತ್ತು ಹೋಗಿತ್ತು. ಇಂಜಿನಿಯರ್ ಬಂದು ಎಸ್ಟಿಮೇಟ್ ತೋರಿಸಿ ಕಾಮಗಾರಿ ಕೈಗೊಳ್ಳಲಿ. ಅಲ್ಲಿಯವರೆಗೆ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಗ್ರಾಪಂ ಅಧ್ಯಕ್ಷ ಕರುಣಾಕರಶೆಟ್ಟಿ ಸೊಸೈಟಿ ಸರ್ಕಲ್ ಬಳಿ ರಸ್ತೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಜನ ಜಮಾಯಿಸಿದ ಹಿನ್ನೆಲೆಯಲ್ಲಿ ಸಂಚಾರ ಕೂಡ ಸ್ಥಗಿತಗೊಂಡಿತ್ತು. ನಂತರ ರಾಜಕೀಯ ಬಣ್ಣ ಕಂಡುಕೊಂಡು ಪರ- ವಿರೋಧ ಚರ್ಚೆಗೆ ಕಾರಣವಾಗಿ ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು.
ಆದರೆ ಇಂಜಿನಿಯರ್ ಬರುವವರೆಗೆ ಕಾಮಗಾರಿ ನಡೆಸುವಂತಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಸಿ.ವಿ.ಚಂದ್ರಶೇಖರ್, ನಾನು ಸ್ಥಳೀಯನಾಗಿದ್ದು ನನಗೂ ಕಾಳಜಿ ಇದೆ. ಕಾಮಗಾರಿ ಉತ್ತಮವಾಗಿ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ ಇಂಜಿನಿಯರ್ ಆಗಮಿಸುತ್ತಿರುವ ಬಗ್ಗೆ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಿಲ್ಲಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಬಳಿಕ ರಾಷ್ಟ್ರೀಯ ಹೆದ್ದಾರಿ ಎಇಇ ನಿಂಗಪ್ಪ ಖುದ್ದು ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ವೇಳೆ ಕಾಮಗಾರಿ ಬಗ್ಗೆ ಸೂಕ್ತ ಮಾಹಿತಿಯನ್ನು ಸ್ಥಳೀಯರು ಪಡೆದುಕೊಂಡರು.