ಚಾಮರಾಜನಗರ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆಯವರ ಸಾಹಿತ್ಯ ಮನುಷ್ಯತ್ವದ ರೂಪಕವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ದ.ರಾ.ಬೇಂದ್ರೆ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದ.ರಾ.ಬೇಂದ್ರೆಯವರು ಕನ್ನಡ ಸಾಹಿತ್ಯಕ್ಕೆ ಹೊಸಹೊಸ ಶಬ್ಧಗಳನ್ನು ಹಾಗೂ ಆ ಶಬ್ಧಗಳ ಹೊಸ ಅರ್ಥವನ್ನು ನೀಡಿದರು. ಅವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದ್ದು, ಇಂದಿಗೆ 60 ವರ್ಷಗಳಾಗಿದೆ. ಅಂತಹ ಮಹಾನ್ ವ್ಯಕ್ತಿಯ ಸ್ಮರಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಆದರ್ಶ ಶಾಲೆಯ ಶಿಕ್ಷಕ ಶಿವಕುಮಾರ್ ಮಾತನಾಡಿ, ಬೇಂದ್ರೆಯವರ ಕಾವ್ಯಗಳು ಒಂದೇ ಸಲುಗೆಗೆ ಓದುಗರ ಮನವನ್ನು ಮುಟ್ಟುತ್ತಿತ್ತು. ಸಾಹಿತ್ಯವನ್ನು ನಾವು ಹೇಗೆ ಅಪ್ಪಿಕೊಳ್ಳಬೇಕು ಎಂಬುದನ್ನು ಬೇಂದ್ರೆಯವರ ಸಾಹಿತ್ಯ ಕಲಿಸಿಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮಹಾಸಭಾ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸ್ ಗೌಡ, ಸದಸ್ಯೆ ಸರಸ್ವತಿ, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಗುರುಲಿಂಗಮ್ಮ, ಬರಹಗಾರ ಲಕ್ಷ್ಮಿನರಸಿಂಹ, ಓಂ ಶಾಂತಿ ಆರಾಧ್ಯ, ಶಿವಲಿಂಗಮೂರ್ತಿ, ಗೋವಿಂದರಾಜು, ರವಿ ಚಂದ್ರಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.