ಬಾಗಲಕೋಟೆ: ‘ನಾಕುತಂತಿ’ ಕನ್ನಡ ಸಾಹಿತ್ಯ ಜಗತ್ತಿನ ಒಂದು ಮಹೋನ್ನತ ಕವಿತೆಯೆಂದರೆ ಅತಿಶಯೋಕ್ತಿಯಾಗಲಾರದು. ಸಾಹಿತ್ಯದ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ದ.ರಾ.ಬೇಂದ್ರೆ ನಿಜಕ್ಕೂ ಕನ್ನಡಕ್ಕೆ ದೇವರು ಕರುಣಿಸಿದ ವರಕವಿ ಎಂದು ಸಾಹಿತಿ ಶ್ಯಾಮಸುಂದರ ಬಿದರಕುಂದಿ ಹೇಳಿದರು.
ಶಿವಾನುಭವ ಸಮಿತಿ ಹಾಗೂ ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ ಚರಂತಿಮಠ ಸಹಯೋಗದಲ್ಲಿ ಇತ್ತೀಚೆಗೆ ಜರುವಗಿದ ಜ್ಞಾನಪೀಠ ಪುರಸ್ಕೃತ ಸಾಹಿತ್ಯ ಸಂವಾದ ತಿಂಗಳ ಉಪನ್ಯಾಸ ಮಾಲಿಕೆಯಲ್ಲಿ ದ.ರಾ. ಬೇಂದ್ರೆಯವರ ‘ನಾಕುತಂತಿ’ ಚಿಂತನಪರ ಭಾವಗೀತೆ ಕುರಿತು ಉಪನ್ಯಾಸ ನೀಡಿದರು.
‘ನಾಕುತಂತಿ’ ಆಧ್ಯಾತ್ಮಿಕ ನೆಲೆಯ ನಿಗೂಢ ಕವನವಾಗಿದೆ. ಬೇಂದ್ರೆಯವರ ಪ್ರಕಾರ ಸಮಸ್ತ ಸೃಷ್ಟಿಯೇ ಒಂದು ವಿರಾಟ್ ವೀಣೆ. ನಾಲ್ಕು ತಂತಿಗಳೆಂದರೆ ನಾನು ಪುರುಷ, ನೀನು ಸ್ತ್ರೀ, ಅವರ ಮಿಲನದ ಫಲವಾದ ಸಂತಾನವೇ ಈ ಆನು, ಇವುಗಳಿಗೆ ಆಧಾರವಾಗಿರುವುದೇ ಪರಾತ್ಪರ ಶಕ್ತಿಯಾದ ತಾನು ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ವಿ.ವಿ.ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸಂವಾದ ಜಿಲ್ಲೆಯ ಸಾಂಸ್ಕೃತಿಕ ಜಗತ್ತನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿರುವುದು ಶ್ಲಾಘನಿಯ ಎಂದರು.
ಎ.ಎಸ್. ಪಾವಟೆ, ಎಸ್.ಆರ್. ಮನಹಳ್ಳಿ, ಬಸವರಾಜ ಭಗವತಿ, ಎಂ.ಸಿ. ಹಾಳವರ, ಎಸ್.ಜಿ. ಕೋಟಿ, ಎಸ್.ಡಿ. ಕೆಂಗಲಗುತ್ತಿ ಮತ್ತಿತರರು ಇದ್ದರು. ಶ್ರೇಯಾ ಜೋರಾಪುರ ಹಾಡಿದ ‘ನಾಲ್ಕುತಂತಿ’ ಗೀತ ಗಾಯನ ಗಮನ ಸೆಳೆಯಿತು.