ಜಿಲ್ಲೆ

ಬೆಸ್ಕಾಂ ಶಾಕ್​ಗೆ ಆರ್​ಟಿಒ ದಂಡಾಸ್ತ್ರ

ತುಮಕೂರು: ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ವಿದ್ಯುತ್​ ಸಂಪರ್ಕ ಕಡಿತ ಮಾಡಿರುವ ಬೆಸ್ಕಾಂ ಸಹಾಯವಾಣಿ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ತುಮಕೂರು ಆರ್​ಟಿಒ ಕಚೇರಿ ಕಳೆದ ಮೂರು ತಿಂಗಳಿನಿಂದ ವಿದ್ಯುತ್​ ಬಿಲ್​ 1.17 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದು, ಬೆಸ್ಕಾಂ ಸಿಬ್ಬಂದಿ ಗುರುವಾರ ಮಧ್ಯಾಹ್ನ ವಿದ್ಯುತ್​ ಸಂಪರ್ಕ ಕಡಿತ ಮಾಡಿರುವುದು ರಾದ್ಧಾಂತಕ್ಕೆ ಮುನ್ನುಡಿಯಾಗಿದೆ.

ವಿದ್ಯುತ್​ ಸಂಪರ್ಕ ಕಡಿತ ಮಾಡಿದ್ದರಿಂದ ಕೋಪಗೊಂಡ ಸಾರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ತುಮಕೂರಿನಲ್ಲಿ ಓಡಾಡುತ್ತಿದ್ದ ಬೆಸ್ಕಾಂ ಸಹಾಯವಾಣಿ ಓಮಿನಿ ವಾಹನದ ದಾಖಲಾತಿಗಳಿಲ್ಲ ಎಂದು ವಶಕ್ಕೆ ಪಡೆದಿರುವುದು ನಾಗರಿಕರಿಗೆ ಪುಕ್ಕಟೆ ಮನರಂಜನೆಯಾಗಿದೆ.

ಬೆಸ್ಕಾಂ ಸಿಬ್ಬಂದಿ ವಾಹನದಲ್ಲಿ ಏಣಿ ಕಟ್ಟಿಕೊಂಡು ಹೋಗಲೂ ಅವಕಾಶವಿಲ್ಲ, ವಾಹನದ ದಾಖಲಾತಿಗಳೂ ಇಲ್ಲ ಎಂಬ ಕಾರಣಕ್ಕೆ ವಾಹನ ವಶಪಡಿಸಿಕೊಳ್ಳಲಾಗಿದೆ.

1.17 ಲಕ್ಷ ರೂ. ಬಿಲ್​ ಬಾಕಿ!?: ಸಾರಿಗೆ ಇಲಾಖೆ ವತಿಯಿಂದ ಕಚೇರಿ ನಿರ್ವಹಣೆಗೆ ಬರಬೇಕಿದ್ದು, ಅನುದಾನ ಬರುವುದು ತಡವಾಗಿದ್ದ ಹಿನ್ನೆಲೆಯಲ್ಲಿ ಆರ್​ಟಿಒ ಕಚೇರಿ 1.17 ಲಕ್ಷ ರೂ. ಬಿಲ್​ ಬಾಕಿ ಉಳಿಸಿಕೊಂಡಿದ್ದು ಈ ಅವಾಂತರಕ್ಕೆ ಕಾರಣವಾಗಿದೆ. ಎರಡೂ ಸರ್ಕಾರಿ ಇಲಾಖೆಯಾದೂ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮನ್ವಯತೆ ಕೊರತೆಯಿಂದ ಇಂತಹ ಟನೆ ನಡೆದಿದ್ದು ಪರಸ್ಪರರು ತಮ್ಮ ಕರ್ತವ್ಯ ಮಾಡಿದ್ದು ಎರಡೂ ಇಲಾಖೆಗೂ ಬಿಸಿ ಮುಟ್ಟಿದೆ.

ವಿದ್ಯುತ್​ ಬಿಲ್​ ಬಾಕಿ ಇದ್ದ ಕಾರಣಕ್ಕೆ ಬೆಸ್ಕಾಂ ಸಿಬ್ಬಂದಿ ಬಿಲ್​ ನೀಡುವಾಗ ಅದರ ಬಗ್ಗೆ ನಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆಯಷ್ಟೇ. ವಿದ್ಯುತ್​ ಸಂಪರ್ಕ ಅವರು ಕಡಿತಗೊಳಿಸಿಲ್ಲ. ಬೆಸ್ಕಾಂ ವಾಹನದಲ್ಲಿ ಏಣಿ ಮೇಲಿಟ್ಟುಕೊಂಡು ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿ ವಾಹನಕ್ಕೆ ದಂಡ ಹಾಕಿದ್ದಾರೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. > ರಾಜು ಪ್ರಾದೇಶಿಕ ಸಾರಿಗೆ ಅಧಿಕಾರಿ, ತುಮಕೂರು