ಜಿಲ್ಲೆ

ಬೆಸ್ಕಾಂ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ; ಕಿರಿದಾದ ರಸ್ತೆಯಲ್ಲಿ ವಿದ್ಯುತ್ ಕಂಬ ಬದಲಿಸಲು ಅವಕಾಶ ನೀಡದ ಜನ

ವಿಜಯಪುರ: ಕೆರೆ ಕೋಡಿ ರಸ್ತೆಯ ನಿವೇಶನಲ್ಲಿದ್ದ 11 ಕೆವಿ ವಿದ್ಯುತ್ ತಂತಿಗಳನ್ನು ಬದಲಾಯಿಸಿ ಬೇರೆ ನಿವೇಶನ ಹಾಗೂ ಕಿರಿದಾದ ರಸ್ತೆ ಮಾರ್ಗದಲ್ಲಿ ಕಂಬ ನೆಡಲು ಮುಂದಾದ ಬೆಸ್ಕಾಂ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಭಾನುವಾರ ಪ್ರತಿಭಟನೆ ನಡೆಸಿದರು.

ಯಾರದೋ ಅನುಕೂಲಕ್ಕಾಗಿ ಎರಡು ಬದಿ ಮನೆಗಳಿರುವ ಕಿರಿದಾದ 8 ಅಡಿ ರಸ್ತೆಗಳಲ್ಲಿ ವಿದ್ಯುತ್ ಲೈನ್ ಎಳೆಯುವುದರಿಂದ ಇಲ್ಲಿನ ನಿವಾಸಿಗಳನ್ನು ತೊಂದರೆಗೆ ಸಿಲುಕಿಸಿದಂತಾಗುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇತರ ನಿವೇಶನದಾತರಿಗೆ ಮನೆ ಕಟ್ಟಲು ತೊಂದರೆಯಾಗುತ್ತದೆ. ಕೇವಲ 100 ಅಡಿ ಅಂತರದಲ್ಲಿ ಶಿಡ್ಲಘಟ್ಟ ಬೈಪಾಸ್ ಮುಖ್ಯರಸ್ತೆ ಇದ್ದು, ಮುಖ್ಯರಸ್ತೆ ಮುಖೇನ ವಿದ್ಯುತ್ ಲೈನ್ ಎಳೆದರೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಸ್ಥಳೀಯ ಅಶ್ವತ್ಥಪ್ಪ ತಿಳಿಸಿದರು.

ಇಲ್ಲಿನ ನಿವೇಶನದಲ್ಲಿ ಕಟ್ಟಡ ಕಟ್ಟಲು ತೊಂದರೆಯಾಗಿದೆ ಎಂದು ನಿವೇಶನದ ಅರ್ಜಿದಾರರು ಎಸ್ಟಿಮೇಟ್ ಮಾಡಿಸಿ, ಬೆಸ್ಕಾಂಗೆ ತಗಲುವ ವೆಚ್ಚ ಭರಿಸಿರುವ ಕಾರಣ ಆ ನಿವೇಶನದಿಂದ ಬೇರೆ ಮಾರ್ಗವಾಗಿ ವಿದ್ಯುತ್ ಲೈನ್ ಎಳೆಯಲಾಗುತ್ತಿದೆ ಎಂದು ಬೆಸ್ಕಾಂ ನೌಕರ ವೆಂಕಟೇಶ್ ತಿಳಿಸಿದರು.

ಇಲಾಖೆ ಅಧಿಕಾರಿಗಳು ಸೂಚಿಸಿದ್ದು, ಅವರ ಮಾಹಿತಿ ಮೇರೆಗೆ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಇದರ ಬಗ್ಗೆ ಈ ಭಾಗದ ಜನರ ಗಮನಕ್ಕೆ ತರಲಾಗಿದೆ ಎಂದು ಗುತ್ತಿಗೆದಾರ ಬೈರೇಗೌಡ ಹೇಳಿದರೂ ಸ್ಥಳೀಯರು ಅವಕಾಶ ಮಾಡಿಕೊಡದಿದ್ದರಿಂದ ಬೆಸ್ಕಾಂ ಸಿಬ್ಬಂದಿ ವಾಪಸಾದರು.

ಸೋಮವಾರ ಇಲಾಖೆಗೆ ದೂರು ನೀಡಿ, ಎಲ್ಲರಿಗೂ ಅನುಕೂಲವಾಗುವಂತೆ ವಿದ್ಯುತ್ ಲೈನ್ ಎಳೆಯಬೇಕೆಂದು ಮನವಿ ಸಲ್ಲಿಸಲಾಗುವುದು ಸ್ಥಳೀಯರಾದ ಶ್ರೀನಿವಾಸ್ ತಿಳಿಸಿದ್ದಾರೆ.