ಸೂಲಿಬೆಲೆ: ಗ್ರಾಮಗಳಲ್ಲಿ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ದಿನದ 24 ಗಂಟೆ ಶ್ರಮಿಸುವ ಬೆಸ್ಕಾಂನ ಲೈನ್‌ಮೆನ್‌ಗಳು ಕೂಡ ಒಂದು ರೀತಿಯಲ್ಲಿ ದೇಶಕಾಯುವ ಯೋಧರಿಗೆ ಸಮಾನ ಎಂದು ಯುವ ಬ್ರಿಗೇಡ್ ಸಂಚಾಲಕ ಅತ್ತಿಬೆಲೆ ಮಂಜುನಾಥ್ ತಿಳಿಸಿದರು.
ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಯುವ ಬ್ರಿಗೇಡ್ ವತಿಯಿಂದ ಶುಕ್ರವಾರ ದೇಶ ಪ್ರೇಮಿಗಳ ದಿನದ ಅಂಗವಾಗಿ ಮಾರ್ಗದಾಳುಗಳನ್ನು ಸನ್ಮಾನಿಸಿ ಮಾತನಾಡಿದರು.
ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಹುಟ್ಟಿಕೊಂಡ ಯುವ ಬ್ರಿಗೇಡ್ ತಂಡ ಸಮಾಜಮುಖಿ ಚಿಂತನೆಗಳನ್ನು ಹೊತ್ತು ಹಲವಾರು ಆಯಾಮಗಳಲ್ಲಿ ಕಾರ್ಯಪ್ರವೃತ್ತವಾಗಿದೆ. ಫೆ.14 ರಂದು ಆಚರಣೆ ಮಾಡುವ ಪ್ರೇಮಿಗಳ ದಿನವನ್ನು ದೇಶ ಪ್ರೇಮಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಅಂತೆಯೇ ಈ ಭಾರಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡಲು ಚಳಿ, ಗಾಳಿ, ಮಳೆ ಎನ್ನದೆ ಹಗಲಿರುಳು ಶ್ರಮಿಸುವ ಲೈನ್‌ಮೆನ್‌ಗಳು ಕೂಡ ಯೋಧರೆಂದು ಪರಿಗಣಿಸಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ತಾಲೂಕು ಅಧ್ಯಕ್ಷ ಎಂ.ಆರ್.ಉಮೇಶ್ ಮಾತನಾಡಿ, ಮನೆಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾದಾಗ ಬೆಸ್ಕಾಂ ಅಧಿಕಾರಿಗಳಿಗಿಂತ ಮಾರ್ಗದಾಳುಗಳು ನಿಗದಿತ ಸಮಯಕ್ಕೆ ಬಂದು ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಾರೆ. ಸನ್ಮಾನಿಸುವ ಕೆಲಸ ಮಾಡಿದ ಯುವ ಬ್ರಿಗೇಡ್ ತಂಡದ ಕಾರ್ಯ ಪ್ರಶಂಸನೀಯ ಎಂದರು.
ಸುಮಾರು 20 ವರ್ಷಗಳಿಂದ ನಿರಂತರವಾಗಿ ಬೆಸ್ಕಾಂ ಕಚೇರಿಯಲ್ಲಿ ಮಾರ್ಗದಾಳುವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮುನೇಗೌಡ ಅವರನ್ನು ಸನ್ಮಾನಿಸಲಾಯಿತು. ಎಲ್ಲ ಸಿಬ್ಬಂದಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಕಿರಿಯ ಸಹಾಯಕ ಎಂಜಿನಿಯರ್ ಅನಿಲ್, ಮಾನವ ಹಕ್ಕುಗಳ ಜಾಗೃತಿ ಸಮಿತಿ ಹೋಬಳಿ ಅಧ್ಯಕ್ಷ ಸ್ಟುಡಿಯೋ ಆನಂದ್, ಯುವ ಬ್ರಿಗೇಡ್ ಸಂಚಾಲಕ ಬೆಟ್ಟಹಳ್ಳಿ ಮಂಜುನಾಥ್ ಇದ್ದರು.