ಜಿಲ್ಲೆ

ಬೆಸಗರಹಳ್ಳಿ ಶಾಲೆಗೆ ಶಾಸಕ ಉದಯ್ ಭೇಟಿ

ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಗುರುವಾರ ಭೇಟಿ ನೀಡಿದ್ದ ಶಾಸಕ ಕೆ.ಎಂ. ಉದಯ್ ಅವರ ಬಳಿ ಸಾರ್ವಜನಿಕರು, ಶಿಕ್ಷಕರು ಹಾಗೂ ಪಾಲಕರು ದೂರುಗಳ ಸುರಿಮಳೆಗೈದರು.

ಸರ್ಕಾರದಿಂದ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದೆ. ಅದು ಬಳಕೆಯಾಗಿಲ್ಲ. ಅಪೂರ್ಣಗೊಂಡಿರುವ ಕಟ್ಟಡ ಹಾಗೂ ಮಳೆ ಬಂದರೆ ಸೋರುವ ಕೊಠಡಿಗಳಲ್ಲಿ ಎರಡು ತರಗತಿಗಳು ನಡೆಯುತ್ತಿವೆ. ಕೊಠಡಿಗಳ ಸಮಸ್ಯೆ ಎದುರಾಗಿದೆ ಎಂದು ಸಮಸ್ಯೆಗಳನ್ನು ಶಾಸಕರ ಬಳಿ ತೆರೆದಿಟ್ಟರು.

ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ನನಗೆ ವಿವರವಾದ ವರದಿ ಸಲ್ಲಿಸಬೇಕು ಎಂದು ಸ್ಥಳದಲ್ಲೇ ಇದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ದೇವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ಅವರಿಗೆ ಎಂದು ಶಾಸಕ ಕೆ.ಎಂ.ಉದಯ್ ಸೂಚಿಸಿದರು.

ಇದೇ ವೇಳೆ ಪಿಡಿಒ ನವೀನ್‌ಕುಮಾರ್ ಅವರನ್ನು ತರಾಟೆ ತೆಗೆದುಕೊಂಡ ಶಾಸಕರು, ಶಾಲೆಯ ಮುಂದೆ ಶುಚಿಯಾಗಿರಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಪ್ರಸಾದ್, ಉಪಾಧ್ಯಕ್ಷೆ ಶಾಹಿನ್ ತಾಜ್, ಕೆಪಿಎಸ್ ಶಾಲೆಯ ಪ್ರಾಂಶುಪಾಲ ಬಂಗಾರ ನಾಯಕ, ಉಪ ಪ್ರಾಂಶುಪಾಲ ಚೆಲುವರಾಜು, ಮುಖಂಡರಾದ ಅಡ್ಡರಸ್ತೆ ಗೋಪಿ, ಧನಂಜಯ, ಕೆರೆಮೇಗಳದೊಡ್ಡಿ ಶೇಖರ್, ಬಿ.ಪಿ. ಗಿರೀಶ್, ನಿಲುವಾಗಿಲು ಗೋವಿಂದರಾಜು, ಪಣ್ಣೆದೊಡ್ಡಿ ಸುಧಾಕರ, ಬಿ.ಎಸ್. ನಾಗರಾಜ, ಮಂಜುಳಾ, ಪ್ರತಿಭಾ, ಸುರೇಂದ್ರ ಇತರರಿದ್ದರು.