ದಾವಣಗೆರೆ: ಅಯೋಧ್ಯೆ ಶ್ರೀರಾಮಮಂದಿರ ಕಟ್ಟಡ ನಿರ್ಮಾಣಕ್ಕೆ ಸಮರ್ಪಿಸಲಿರುವ ಬೆಳ್ಳಿ ಇಟ್ಟಿಗೆಯನ್ನು ಪಿಜೆ ಬಡಾವಣೆಯ ರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರ ಸಾಂಕೇತಿಕವಾಗಿ ಪೂಜಿಸಲಾಯಿತು.
ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ, 12 ಲಕ್ಷ ರೂ. ವೆಚ್ಚದ, 15 ಕೆಜಿ ತೂಕದ ಈ ಬೆಳ್ಳಿ ಇಟ್ಟಿಗೆಯನ್ನು ಪೂಜಿಸಿದರು. ಪುಷ್ಪಾರ್ಚನೆ ಮಾಡಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದ ಸರಳ ಕಾರ್ಯಕ್ರಮದಲ್ಲಿ ಶ್ರೀರಾಮ, ಭಾರತಮಾತೆ ಪರ ಜಯಕಾರ ಮೊಳಗಿತು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನೂತನವಾಗಿ ನಿರ್ಮಾಣವಾಗುತ್ತಿದ್ದು 2024ನೇ ವರ್ಷದ ಮಕರ ಸಂಕ್ರಾಂತಿ ವೇಳೆ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ದಾವಣಗೆರೆ ಭಕ್ತರು ಸೇರಿ ನಿರ್ಮಿಸಿದ ಬೆಳ್ಳಿ ಇಟ್ಟಿಗೆಯ ದರ್ಶನ ಮಾಡಿದ್ದೇವೆ. ಮುಂಬರುವ ದಿನದಲ್ಲಿ ಭಕ್ತರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ, ಸೂಕ್ತ ಮುಹೂರ್ತದಲ್ಲಿ ಅದರ ಸಮರ್ಪಣೆ ನಡೆಯಲಿ. ಎಲ್ಲ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಪೇಜಾವರ ಶ್ರೀಗಳು ಇದೇ ವೇಳೆ ಆಶಿಸಿದರು.
ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ ಜನವರಿ 21ರ ನಂತರ ಪೇಜಾವರ ಶ್ರೀಗಳು ದಿನಾಂಕ ನೀಡುವ ಭರವಸೆ ನೀಡಿದ್ದು, ಭವ್ಯ ಕಾರ್ಯಕ್ರಮ ಮಾಡಿ ಶ್ರೀಗಳ ಮೂಲಕ ಸಲ್ಲಿಸಲಾಗುವುದು ಎಂದರು.
ಮೇಯರ್ ಜಯಮ್ಮ ಗೋಪಿನಾಯ್ಕ, ಉಪಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ.ವೀರೇಶ್, ಪಾಲಿಕೆ ಸದಸ್ಯರಾದ ಎಲ್.ಡಿ.ಗೋಣೆಪ್ಪ, ಸೋಗಿ ಶಾಂತಕುಮಾರ್, ಮುಖಂಡರಾದ ಪಿ.ಸಿ.ಶ್ರೀನಿವಾಸ್, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಜಯಮ್ಮ, ಗೌತಮ್ ಜೈನ್, ತರಕಾರಿ ಶಿವು ಇತರರಿದ್ದರು.