ಜಿಲ್ಲೆ

ಬೆಳ್ಳಂಬೆಳಗ್ಗೆ ತಹಸೀಲ್ದಾರ್ ರೌಂಡ್ಸ್

Gadag

ಲಕ್ಷೆ್ಮೕಶ್ವರ: ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ವ್ಯಾಪಾರ ವಹಿವಾಟಿಗೆಂದು ಸೇರಿದ್ದ ಜನಸಂದಣಿ ನೋಡಿ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ವ್ಯಾಪಾರಸ್ಥರು ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು. ಬಳಿಕ ರೌಂಡ್ಸ್ ಹಾಕಿ ಜನಸಂದಣಿಗೆ ಕಾರಣರಾದ ತಳ್ಳುಗಾಡಿಗಳನ್ನು ತೆರವುಗೊಳಿಸಿದರು. ದಿನಸಿ ಹೊರತುಪಡಿಸಿ ವ್ಯಾಪಾರ ಮಾಡುತ್ತಿದ್ದ ಹಾರ್ಡ್​ವೇರ್, ಪ್ಲಾಸ್ಟಿಕ್ ಇತರ ನಾಲ್ಕಾರು ಅಂಗಡಿಗಳಿಗೆ ಬೀಗ ಹಾಕಿಸಿದರು.

ಕರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ನಿತ್ಯ ಬೆಳಗ್ಗೆ 6ರಿಂದ 9 ರವರೆಗೆ ದಿನಸಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿತ್ತು. ದಿನಸಿ ವ್ಯಾಪಾರಸ್ಥರು ತಾಲೂಕಾಡಳಿತದ ಸೂಚನೆ ಪಾಲನೆ ಮಾಡಿದ್ದರಾದರೂ ಖರೀದಿಗೆ ಬರುವ ಜನರನ್ನು ಗುರಿಯಾಗಿಸಿಕೊಂಡು ತರಕಾರಿ ವ್ಯಾಪಾರಸ್ಥರು ಮಾರುಕಟ್ಟೆಯ ಸುತ್ತ ಸಾಲುಗಟ್ಟಿ ನಿಂತಿದ್ದು ಜನಸಂದಣಿಗೆ ಕಾರಣವಾಯಿತು.

ಈ ಬಗ್ಗೆ ಮಾಹಿತಿ ಪಡೆದ ತಹಸೀಲ್ದಾರರು ಬೆಳಗ್ಗೆ ಮಾರುಕಟ್ಟೆಗೆ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡರು. 1 ಗಂಟೆ ಪೇಟೆಯಲ್ಲಿ ಸುತ್ತಾಡಿದ ಅವರು ದಿನಸಿ ಅಂಗಡಿ ಹೊರತುಪಡಿಸಿ ತೆಗೆದಿದ್ದ ಸ್ಟೇಷನರಿ, ಹೋಮ್ ಅಪ್ಲಾಯನ್ಸ್, ಬಟ್ಟೆ ಅಂಗಡಿ, ಬೀಡಾ ಅಂಗಡಿಗಳಿಗೆ ಬಾಗಿಲು ತೆರೆಯದಂತೆ ಎಚ್ಚರಿಕೆ ನೀಡಿದರು.

ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದರೂ ವ್ಯಾಪಾರಸ್ಥರು ಹಾಗೂ ಜನರಿಂದ ಪೂರ್ಣ ಪ್ರಮಾಣದಲ್ಲಿ ಸಹಕಾರ ಸಿಗುತ್ತಿಲ್ಲ. ಇನ್ನು ಮೇಲೆ ಶುಕ್ರವಾರ ಮತ್ತು ಸೋಮವಾರ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆ ಬಂದ್ ಮಾಡಲಾಗುವುದು. ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸ್ಥಳೀಯ ಪುರಸಭೆ, ಪೊಲೀಸರಿಗೆ ಸೂಚಿಸಲಾಗುವುದು. ಉಳಿದ ದಿನಗಳಲ್ಲಿ ಬೆಳಗಿನ 6ರಿಂದ 9 ಗಂಟೆ ಅವಧಿಯಲ್ಲಿ ಪಟ್ಟಣದಲ್ಲಿ ಪೇಪರ್, ಔಷಧ, ದಿನಸಿ, ತರಕಾರಿ, ಹಾಲು, ಹಣ್ಣು ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ಸಿಪಿಐ ಆರ್.ಎಚ್. ಕಟ್ಟಿಮನಿ, ಪಿಎಸ್​ಐ ಶಿವಯೋಗಿ ಆಲೂರ, ಪುರಸಭೆ ಅಧಿಕಾರಿಗಳಾದ ಮಂಜುನಾಥ ಮುದಗಲ್, ಬಸವರಾಜ ಬಳಗಾನೂರ, ಬಸವಣ್ಣೆಪ್ಪ ನಂದೆಣ್ಣವರ, ಇತರರು ಇದ್ದರು.

ನಿಯಮ ಉಲ್ಲಂಘಿಸಿದರೆ ಕ್ರಮ:
ತರಕಾರಿ ಮತ್ತು ಹಣ್ಣು ವ್ಯಾಪಾರಿಗಳು ಪೇಟೆಯ ಬಳಿ ನಿಂತುಕೊಳ್ಳದೆ ತಮಗೆ ನೀಡಿದ ಕೈಗಾಡಿಯಲ್ಲಿ ವಾರ್ಡ್​ಗಳಿಗೆ ಹೋಗಿ ಮಾರಾಟ ಮಾಡಬೇಕು. ಪಾಸ್ ಪಡೆದ ವ್ಯಾಪಾರಿಗಳು ಮಾತ್ರ ವ್ಯಾಪಾರ ಮಾಡಬೇಕು. ಒಂದು ವೇಳೆ ತಾಲೂಕಾಡಳಿತದ ನಿರ್ದೇಶನಗಳನ್ನು ಉಲ್ಲಂಘಿಸಿದರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿತಿಳಿಸಿದ್ದಾರೆ.