ಸಾಗರ: ಎಲ್ಲವೂ ಕಲ್ಪಿತ ಆಲೋಚನೆಗಳಾಗಿ ಸತ್ಯ ಕಳೆದು ಹೋಗುತ್ತಿದೆ. ಸತ್ಯದ ಅನಾವರಣವಾಗಬೇಕು ಎಂದರೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ನಿಮ್ಹಾನ್ಸ್‌ನ ನಿವೃತ್ತ ಮನೋವೈದ್ಯ, ಪ್ರಾಧ್ಯಾಪಕ ಡಾ. ಸಿ.ಆರ್.ಚಂದ್ರಶೇಖರ್ ತಿಳಿಸಿದರು.
ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜಿನಲ್ಲಿ ಗುರುವಾರ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ಹಾಗೂ ಕಾಲೇಜಿನಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ‘ಮೂಢನಂಬಿಕೆಗಳು ಮತ್ತು ಮಾನಸಿಕ ಆರೋಗ್ಯ’ ವಿಷಯ ಕುರಿತು ಗುರುವಾರ ಉಪನ್ಯಾಸ ನೀಡಿದರು.
ಮಾಟ-ಮಂತ್ರ, ದೆವ್ವ-ಭೂತ, ಪ್ರೇತ-ಪಿಶಾಚಿ, ಮೈಮೇಲೆ ದೇವರು ಬರುವುದು, ವಾಸ್ತು ಹೆಸರಿನಲ್ಲಿ ಮೋಸ ಇತರ ವಿಷಯಗಳ ಬಗ್ಗೆ ಜಾಗ್ರತರಾಗಿರಬೇಕು. ವೈಜ್ಞಾನಿಕವಾಗಿ ಯೋಚನೆ ಮಾಡದೆ ಇರುವವರ ಮನಸ್ಸಿನ ಮೇಲೆ ದಾಳಿ ಮಾಡಿ, ಹಣ ಸುಲಿಗೆ ಮಾಡುವ ಪ್ರಕ್ರಿಯೆ ಜಾಸ್ತಿಯಾಗುತ್ತಿದೆ. ಎಲ್ಲಿಯವರೆಗೆ ನಾವು ಇಂತಹ ಮೂಢನಂಬಿಕೆಯ ದಾಸರಾಗಿ ಇರುತ್ತೇವೆಯೋ ಅಲ್ಲಿಯವರೆಗೆ ನಮ್ಮ ಮನಸ್ಸಿನ ಜತೆ ಆಟವಾಡಿ ಹಣ ಗಳಿಕೆ ಮಾಡುವವರು ದೊಡ್ಡ ಸಂಖ್ಯೆಯಲ್ಲಿರುತ್ತಾರೆ ಎಂದರು.
ನಾವು ವಾಸ್ತವಿಕವಾಗಿ ಯೋಚನೆ ಮಾಡುವುದನ್ನು ಕಲಿಯುವ ಅಗತ್ಯವಿದೆ. ಸತ್ಯ-ಮಿಥ್ಯಗಳ ನಡುವಿನ ಅಂತರವನ್ನು ನಾವು ಗುರುತಿಸದೆ ಹೋದರೆ ಮೋಸದ ಬಲೆಗೆ ನಮ್ಮನ್ನು ನಾವೆ ತಳ್ಳಿಕೊಂಡಂತೆ ಆಗುತ್ತದೆ. ನಮ್ಮಲ್ಲಿ ಜನರಿಗಿಂತ ದೇವರ ಸಂಖ್ಯೆಯ ದೊಡ್ಡ ಪ್ರಮಾಣದಲ್ಲಿದೆ. ದೇವರ ಹೆಸರಿನಲ್ಲಿ ಹೆಚ್ಚುತ್ತಿರುವ ಶೋಷಣೆ ತಡೆಗಟ್ಟಲು ನಾವು ಮೊದಲು ಜಾಗ್ರತರಾಗಬೇಕು. ಮನಸ್ಸಿನ ಮೇಲೆ ಅತಿಕ್ರಮಣ ನಡೆಸುವ ಮೂಢನಂಬಿಕೆಗಳನ್ನು ಪೋಷಣೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ತಿಳಿಸಿದರು.