ಚಿತ್ರದುರ್ಗ: ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ರೈತಸಂಘ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಅಂದಾಜು ಶೇ.30 ರೈತರಿಗೆ ಬೆಳೆ ವಿಮೆ ಪರಿಹಾರ ಜಮಾ ಆಗಿಲ್ಲ. ಆದ್ದರಿಂದ ಆರ್ಹ ಎಲ್ಲ ರೈತರಿಗೆ ಕೂಡಲೇ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಮಳೆಯಾಶ್ರೀತ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ ನಷ್ಟಕ್ಕೆ ಪರಿಹಾರ ವಿತರಿಸಲಾಗಿದೆ ಹೊರತು, ಇತರ ಬೆಳೆಗಳ ನಷ್ಟಕ್ಕೆ ಪರಿಹಾರ ಕೊಟ್ಟಿಲ್ಲ. ಪಹಣಿಯಲ್ಲಿ ಕೊಳವೆ ಬಾವಿ ಇದೆ ಎಂದು ನಮೂದಾಗಿದ್ದರೂ ಅಂತಹ ರೈತರಿಗೂ ಪರಿಹಾರ ದೊರೆತಿಲ್ಲ. ಮಳೆಯಾಶ್ರೀತ ಒಂದು ಹೆಕ್ಟೇರ್ ಬೆಳೆ ನಷ್ಟಕ್ಕೆ 8500 ರೂ., ನೀರಾವರಿ ಆಶ್ರೀತ ಒಂದು ಹೆಕ್ಟೇರ್‌ಗೆ ಬೆಳೆ ನಷ್ಟಕ್ಕೆ 17000 ರೂ., ಒಂದು ಹೆಕ್ಟೇರ್ ದೀರ್ಘಾವಧಿ ಬೆಳೆ ನಷ್ಟಕ್ಕೆ 22000 ರೂ. ಎಂದು ಸರ್ಕಾರ ಘೋಷಿಸಿದ್ದರೂ ನೀರಾವರಿ ಆಶ್ರೀತ ಹಾಗೂ ದೀರ್ಘಾವಧಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಬಿಡುಗಡೆಯಾಗಿಲ್ಲ. ಆದ್ದರಿಂದ ನಷ್ಟ ಅನುಭವಿಸಿರುವ ಎಲ್ಲ ರೈತರಿಗೂ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
ಮಂಗಾರು ಪ್ರಾರಂಭವಾಗಿದ್ದು, ಬಿತ್ತನೆಗೆ ಉಚಿತ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಬೇಕು. ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರ ಹಣ ಹಾಗೂ ಇತರ ಪಿಂಚಣಿ ಮೊತ್ತಗಳನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ತಾಲೂಕಾಧ್ಯಕ್ಷ ಹಂಪಯ್ಯಮಾಳಿಗೆ ಧನಂಜಯ, ಪದಾಧಿಕಾರಿಗಳಾದ ಚೇತನ್ ಯಳನಾಡು, ತಿಪ್ಪೇಸ್ವಾಮಿ ಮಲ್ಲಾಪುರ, ರಂಗಸ್ವಾಮಿ, ಪ್ರಭು ಇಸಾಮುದ್ರ, ಕಾಂತರಾಜ್ ಮತ್ತಿತರರು ಇದ್ದರು.