ಕೊಡೇಕಲ್: ರೈತರ ಪಾಲಿನ ಬಿಳಿ ಬಂಗಾರ ಹತ್ತಿ ಬೆಳೆದು ಉತ್ತಮ ಇಳುವರಿ ಮತ್ತು ಲಾಭ ನಿರೀಕ್ಷಿಸಿದ್ದ ರೈತರಿಗೆ ಬೆಳೆ ಬಹುತೇಕ ಕೈಕೊಟ್ಟಂತೆ ಕಾಣುತ್ತಿದ್ದು, ಕೊಡೇಕಲ್ ರೈತನೊಬ್ಬ ಬಿತ್ತನೆ ಮಾಡಿದ್ದ ಹತ್ತಿಯನ್ನು ಕಿತ್ತಿ ಹಾಕುವ ಮೂಲಕ ಅಂತರಾಳದ ನೋವು ತೋಡಿಕೊಂಡಿದ್ದಾನೆ.
ಲೀಸ್ ಆಧಾರದ ಮೇಲೆ ಜಮೀನು ಪಡೆದು ಎರಡು ಎಕರೆಯಲ್ಲಿ ದುಬಾರಿ ದರದ ಬೀಜ ಖರೀದಿಸಿ ಬಿತ್ತನೆ ಮಾಡಿದ್ದ ಹತ್ತಿ ಅತಿಯಾದ ಮಳೆ ಮತ್ತು ಆರಂಭದಲ್ಲಿ ವಕ್ಕಿರಿಸಿದ್ದ ಬಂದ ರೋಗ ನಿಯಂತ್ರಣಕ್ಕೆ ಬಾರದ್ದರಿಂದ ಬೇಸತ್ತು ರೈತ ಶಿವಣ್ಣ ಪೂಜಾರಿ ಕಾಯಿ ಬಿಟ್ಟಿದ್ದ ಹತ್ತಿ ಬೆಳೆಯನ್ನು ಕಿತ್ತು ಹಾಕುತ್ತಿದ್ದಾನೆ.
ನಾಲ್ಕು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಹತ್ತಿ ಸಮೃದ್ದವಾಗಿ ಬಂದಿದ್ದನ್ನು ನೋಡಿ ಉತ್ತಮ ಇಳುವರಿ ಆಶಾಭಾವ ಮೂಡಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಸುರಿದ ಎಡೆಬಿಡದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಿ ಹುಲುಸಾಗಿ ಬೆಳೆದು ಹೂ ಬಿಡುವ ಹಂತದಲ್ಲಿದ್ದ ಹತ್ತಿಗೆ ತಾಮ್ರ ರೋಗ ಬಾಧೆ ಕಂಡಿತು. ದುಬಾರಿ ಬೆಲೆಯ ಕ್ರಿಮಿನಾಶಕ ಸೊಂಪಡಣೆ ಮೂಲಕ ರೋಗ ಹತೋಟಿಗೆ ತರುವ ವೇಳೆ ಮತ್ತೆ ಸುರಿದ ಮಳೆ ರೈತನ ಶ್ರಮವನ್ನೆಲ್ಲ ವ್ಯರ್ಥವಾಗಿಸಿತು.
ಆರಂಭಿಕ ಹಂತದಲ್ಲಿ ತಾಮ್ರ ರೋಗ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದ ರೈತ ಶಿವಣ್ಣ ನಂತರ ಹತ್ತಿ ಕಾಯಿ ಕಟ್ಟುವ ವೇಳೆ ಕಾಯಿಕೊರಕ ಬಾಧೆ ವಕ್ಕರಿಸಿದ್ದರಿಂದ ಬೆಳೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಬಾರಿ ಔಷಧ ಸಿಂಪಡಣೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ರೋಸಿಹೋಗಿರುವ ಈತ ಕೈಯಾರೆ ಬೆಳೆದಿದ್ದ ಹತ್ತಿಯನ್ನು ಕೀಳಲು ಮುಂದಾಗಿದ್ದಾನೆ.