ನಂದಗಾಂವ ಗ್ರಾಮದಲ್ಲಿ ಮೆಕ್ಕೆಜೋಳ ಬೆಳೆ ಹಳದಿ ಬಣ್ಣಕ್ಕೆ ತಿರುಗಿರುವುದು. 
ಜಿಲ್ಲೆ

ಬೆಳೆಗೆ ಕೀಟ ಕಾಟ, ಕಂಗೆಟ್ಟ ಅನ್ನದಾತ

ಅಥಣಿ ಗ್ರಾಮೀಣ: ಅಥಣಿ ತಾಲೂಕಿನಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಮೆಕ್ಕೆಜೋಳ, ತೊಗರಿ, ಹೆಸರು ಹಾಗೂ ಉದ್ದು ಬೆಳೆಗಳಿಗೆ ರಸ ಹೀರುವ, ಹೇನು ಹಾಗೂ ಲದ್ದಿ ಹುಳು ಬಾಧೆ ಕಾಡುತ್ತಿದ್ದು, ರೈತರಿಗೆ ಆತಂಕ ಎದುರಾಗಿದೆ. ಕೀಟ ನಿರ್ವಹಣೆಗೆ ಕೃಷಿಕರು ಹರಸಾಹಸಪಡುತ್ತಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಉದ್ದು, ತೊಗರಿ ಹಾಗೂ ಮೆಕ್ಕೆಜೋಳ ಬೆಳೆಗಳ ಬಿತ್ತನೆ ಮಾಡಿದ್ದಾರೆ. ಬೆಳೆಗಳು ಕೂಡ ನಿರೀಕ್ಷೆಯಂತೆ ಬೆಳೆದಿದ್ದರಿಂದ ಖುಷಿಯಲ್ಲಿದ್ದ ರೈತರಿಗೆ ಈಗ ಸತತವಾಗಿ ಜಿಟಿ-ಜಿಟಿ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ಹಾಳಾಗುವ ಭಯ ಎದುರಾಗಿದೆ. ಅಥಣಿ ತಾಲೂಕಿನಲ್ಲಿ ಒಟ್ಟು ಮೆಕ್ಕೆಜೋಳ 11.235 ಹೆಕ್ಟೇರ್, ಹೆಸರು 456 ಹೆಕ್ಟೇರ್, ಉದ್ದು 7246 ಹೆಕ್ಟೇರ್, ತೊಗರಿ 10.256 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಜಿಟಿಜಿಟಿ ಮಳೆಯಿಂದ ಪೂರಕ ವಾತಾವರಣ ಸೃಷ್ಟಿಯಾದಂತಾಗಿ ರಸ ಹೀರುವ ಹುಳ, ಹೇನು, ಲದ್ದಿ ಕೀಟಗಳು ಕಾಣಿಸಿಕೊಳ್ಳುತ್ತಿದೆ. ಪೋಷಕಾಂಶ ಕೊರತೆಯಿಂದ ಬೆಳೆಗಳು ಕೀಟಗಳ ಜತೆಗೆ ಹಳದಿ ಬಣ್ಣಕ್ಕೂ ತಿರುಗುತ್ತಿವೆ. ಕೀಟಗಳ ಹಾಗೂ ಹಳದಿ ಬಣ್ಣಕ್ಕೆ ತಿರುಗಿರುವ ಬೆಳೆಗಳಿಗೆ 3-4 ಬಾರಿ ಸುಧಾರಿತ ಹಾಗೂ ದುಬಾರಿ ವೆಚ್ಚದ ಔಷಧ ಸಿಂಪಡಿಸಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬೆಳೆಗಳನ್ನು ನೆಚ್ಚಿ ಬಿತ್ತನೆ ಮಾಡಿದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಈ ವರ್ಷ ತೊಗರಿ, ಹೆಸರು, ಉದ್ದು ಹಾಗೂ ಮೆಕ್ಕೆಜೋಳ ಬೆಳೆ ನೆಚ್ಚಿ ಸಾಲ-ಸೋಲ ಮಾಡಿಕೊಂಡ ರೈತ ಮತ್ತಷ್ಟು ಹೈರಾಣಾಗಿದ್ದಾನೆ.

ಪ್ರಸಕ್ತ ವರ್ಷ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಹೆಸರು, ಉದ್ದು, ತೊಗರಿ ಹಾಗೂ ಮೆಕ್ಕೆಜೋಳ ಬಿತ್ತನೆ ಮಾಡಿದ್ದೀವಿ. ಬೆಳೆಗಳು ಚೆನ್ನಾಗಿವೆ. ಆದರೆ, ಜಿಟಿ-ಜಿಟಿ ಮಳೆಯಿಂದ ಕೀಟ ಬಾಧೆ ಶುರುವಾಗಿದೆ. ಎಷ್ಟೇ ಉಪಚಾರ ಮಾಡಿದರೂ ಬೆಳೆ ಸುಧಾರಣೆಯಾಗಿಲ್ಲ.| ಅರುಣ ಕೋಹಳ್ಳಿ ಒಣ ಬೇಸಾಯಗಾರರ ಸಂಘದ ತಾಲೂಕಾಧ್ಯಕ್ಷ, ಅಥಣಿಸತತ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಬೆಳೆಗಳಿಗೆ ಕೀಟಬಾಧೆ ಕಾಡುತ್ತಿದ್ದು, ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ರೈತರು ಭಯಪಡಬೇಕಾದ ಅಗತ್ಯವಿಲ್ಲ. ಎರಡು ದಿನ ಬಿಸಿಲು ಬಿದ್ದರೆ ಬೆಳೆಗಳು ಸುಧಾರಿಸುತ್ತವೆ. ಈಗಾಗಲೇ ಬೆಳೆ ನಿರ್ವಹಣೆ ಮಾಡಲು ಬಳಸಬೇಕಾದ ಕೀಟನಾಶಕ ಕುರಿತು ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಸಹಾಯಕರ ಮೂಲಕ ಮಾಹಿತಿ ನೀಡಲಾಗುತ್ತಿದೆ.| ನಿಂಗಣ್ಣ ಬಿರಾದಾರ ಸಹಾಯಕ ಕೃಷಿ ನಿರ್ದೇಶಕ, ಅಥಣಿ

| ಮೋಹನ ಪಾಟಣಕರ ಅಥಣಿ ಗ್ರಾಮೀಣ